ಮಡಿಕೇರಿ, ಮೇ ೧೦: ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ನೇತೃತ್ವದಲ್ಲಿ ಕ್ರೀಡೋತ್ಸವ ಪ್ರಯುಕ್ತ ಸಮ್ಮಿಲನ - ೨೦೨೬ ಕಾರ್ಯಕ್ರಮ ತಾ. ೧೬ ಮತ್ತು ೧೭ ರಂದು ಮಡಿಕೇರಿ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಕೆ. ದಾಮೋದರ್ ತಿಳಿಸಿದ್ದಾರೆ. ಜಿಲ್ಲಾ ವ್ಯಾಪ್ತಿಯ ೫ ಸಾವಿರಕ್ಕೂ ಹೆಚ್ಚಿನ ಕುಲ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ. ಸಮಾಜದ ಸ್ವಾಭಿಮಾನದ ಸಂಕೇತ. ನಮ್ಮ ಸಂಘಟನೆಯ ಹೆಜ್ಜೆಯು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕ್ರೀಡಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ತಾ. ೧೬ ರಂದು ಬೆಳಿಗ್ಗೆ ೭ ಗಂಟೆಗೆ ಓಂಕಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಕ್ರೀಡಾಜ್ಯೋತಿ ತಂದು ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಗುವುದು. ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ರೂ. ೨೦ ಸಾವಿರ, ದ್ವಿತೀಯ ತಂಡಕ್ಕೆ ರೂ. ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ತಾ. ೧೭ ರಂದು ಹಗ್ಗಜಗ್ಗಾಟ, ಸಂಗೀತ ಕುರ್ಚಿ ಸೇರಿ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದರು. ತಾ. ೧೭ ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಪ್ರಬಾರ ಅಧ್ಯಕ್ಷ ಕೆ.ಕೆ. ದಾಮೋದರ್ ವಹಿಸಲಿದ್ದಾರೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ, ಚಿತ್ರನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಆಗಮಿಸಲಿದ್ದಾರೆ. ರಾಜ್ಯ ಕುಂಬಾರ ನಿಗಮದ ಅಧ್ಯಕ್ಷ ಡಾ. ಶ್ರೀನಿವಾಸ್ ವೇಲು, ನ್ಯಾಯಾಧೀಶರಾದ ರೇಣುಕಾಂಬ, ಮಂಗಳೂರು, ಕಾಸರಗೋಡು, ಮೈಸೂರು, ಬೆಂಗಳೂರು ಜಿಲ್ಲೆಗಳ ಕುಲಾಲ ಸಂಘಗಳ ಅಧ್ಯಕ್ಷರು, ಸಂಘದ ಸ್ಥಾಪಕ ಅಧ್ಯಕ್ಷ ಮುತ್ತಮ್ಮ ಕೋಟೆ ಹಾಗೂ ಮಾಜಿ ಅಧ್ಯಕ್ಷ ಕುಶಾಲಪ್ಪ ಮೂಲ್ಯ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಮೊಟ್ಟಮೊದಲ ಕುಂಬಾರ ನಿಗಮದ ಅಧ್ಯಕ್ಷ ಡಾ. ಶ್ರೀನಿವಾಸ್ ವೇಲು ಹಾಗೂ ಸಮಾಜದ ಏಳಿಗೆಗಾಗಿ ದುಡಿದ ಇತರರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಉಪಾಧ್ಯಕ್ಷ ಸುರೇಶ್, ಖಜಾಂಚಿ ಕೆ.ಎಸ್. ಗಿರೀಶ್, ನಿರ್ದೇಶಕರಾದ ರಾಮಚಂದ್ರ, ಕೆ.ವೈ. ಅಶ್ವತ್ ಇದ್ದರು.