ನಾಪೋಕ್ಲು, ಮೇ ೧೧: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದ ಶ್ರೀ ದೇವಿಯ ಪುನರ್ ಪ್ರತಿಷ್ಠಾಪನೆ ಅಷ್ಟಬಂಧಬ್ರಹ್ಮ ಕಲಶ ಹಾಗೂ ವಾರ್ಷಿಕೋತ್ಸವ ದಿವಾಕರ ಭಟ್ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.

ವಿವಿಧ ದೇವತಾ ಕಾರ್ಯಗಳು ಶುಕ್ರವಾರದಿಂದ ಪ್ರಾರಂಭಗೊAಡು ಅಂದು ದೇವಿಯ ಪ್ರತಿಷ್ಠಾಪನೆ, ಎತ್ತುಪೋರಾಟ, ದೇವರ ನೃತ್ಯ ಬಲಿ, ಹಾಗೂ ಮಹಾಪೂಜೆ ತೀರ್ಥ ಪ್ರಸಾದವನ್ನು ವಿತರಿಸಲಾಯಿತು. ಅಧಿಕ ಸಂಖ್ಯೆಯ ಭಕ್ತರು ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡಿದ್ದು ಬಳಿಕ ಸರೋಜಮ್ಮ ಅವರ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಶನಿವಾರ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವಿಯ ಅವಭೃತ ಸ್ನಾನ, ನೃತ್ಯ ಬಲಿ ಹಾಗೂ ಮಹಾಪೂಜೆ ದೇವತಾ ಕಾರ್ಯಗಳು ನಡೆದೆವು. ಈ ಸಂದರ್ಭ ಕಾಫಿ ಬೆಳೆಗಾರ ಬೊಟ್ಟೋಳಂಡ ದೇವಿ ದೇವಯ್ಯ ಅವರ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ಉತ್ತಮವಾಗಿ ನೆರವೇರಿಸಿಕೊಟ್ಟರು. ಉತ್ಸವದಲ್ಲಿ ಊರಿನ ಹಾಗೂ ಪರ ಊರಿನ ಭಗವದ್ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಹರಕೆ ಕಾಣಿಕೆಗಳನ್ನು ಒಪ್ಪಿಸಿದರು.