ಕೂಡಿಗೆ, ಮೇ ೧೧: ಆಟವಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಬಾಲಕಿ ಗಂಭೀರ ಗಾಯಗೊಂಡ ಘಟನೆ ಕುಶಾಲನಗರದ ಸಮೀಪ ಗುಮ್ಮನಕೊಲ್ಲಿಯಲ್ಲಿ ನಡೆದಿದೆ.
ಕೂಡಿಗೆ ಗ್ರಾಮದ ಉಮೇಶ್ ಹಾಗೂ ರೇಷ್ಮಾ ದಂಪತಿಯ ಪುತ್ರಿ ಸಾನ್ವಿ (೧೪) ತನ್ನ ತಾಯಿ ಗುಮ್ಮನಕೊಲ್ಲಿಯಲ್ಲಿ ನಡೆಸುತ್ತಿರುವ ಬ್ಯೂಟಿಪಾರ್ಲರ್ಗೆ ತೆರಳಿದ ಸಂದರ್ಭ ಅವಘಡ ಸಂಭವಿಸಿದೆ. ತಾಯಿಯೊಂದಿಗೆ ಬ್ಯೂಟಿಪಾರ್ಲರ್ಗೆ ತೆರಳಿ ಮಹಡಿಯಲ್ಲಿ ಮತ್ತೊಂದು ಬಾಲಕಿಯೊಂದಿಗೆ ಆಟವಾಡುತ್ತಿದ್ದ ಸಂದರ್ಭ ಕಟ್ಟಡದ ಮೇಲ್ಭಾಗದಿಂದ ಹಾದುಹೋಗಿರುವ ೧೧ ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಸಾನ್ವಿಗೆ ತಗುಲಿದೆ. ಪರಿಣಾಮ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು.