ಚೆಯ್ಯಂಡಾಣೆ, ಮೇ ೧೨: ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಾಗೂ ಎಮ್ಮೆಮಾಡುವಿನ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳ ಸಹಯೋಗದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಚಕ್ಕೇರ ತಂಡ ಕುವೆಲೆರ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕುವೆಲೆರ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಎಮ್ಮೆಮಾಡು ಪ್ರೌಢಶಾಲಾ ಮೈದಾನಲ್ಲಿ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಒಟ್ಟು ೪೮ ಜಮ್ಮಾ ಮುಸ್ಲಿಂ ಕುಟುಂಬ ತಂಡಗಳು ಪಾಲ್ಗೊಂಡಿದ್ದವು. ಇದರಲ್ಲಿ ಚೆಮ್ಬಾರಂಡ, ಕೂರುಳಿಕಾರಂಡ, ಕುವೆಲೆರ ಹಾಗೂ ಚಕ್ಕೇರ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದವು.
ಸೆಮಿಫೈನಲ್‌ನಲ್ಲಿ ಕುವೆಲೆರ ತಂಡ ಕೂರುಳಿಕಾರಂಡ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು. ಚಕ್ಕೇರ ತಂಡವು ಚೆಮ್ಬಾರಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯಾಟದ ಫೈನಲ್ ಸೆಟ್‌ನಲ್ಲಿ ೧೫-೧೩ ರಲ್ಲಿ ಕುವೆಲರ ಕುಟುಂಬ ತಂಡವನ್ನು ಮಣಿಸಿ ಚಕ್ಕೇರ ಕುಟುಂಬ ತಂಡ ಕೊಡವ ಜಮ್ಮಾ ಮುಸ್ಲಿಂ ವಾಲಿಬಾಲ್ ಕಪ್‌ನ್ನು ತನ್ನದಾಗಿಸಿಕೊಂಡಿತು.
ತೃತೀಯ ಸ್ಥಾನವನ್ನು ಚೆಮ್ಬಾರಂಡ ನಾಲ್ಕನೇ ಸ್ಥಾನವನ್ನು ಕೂರುಳಿಕಾರಂಡ ಕುಟುಂಬ ಪಡೆಯಿತು. ಚಾಂಪಿಯನ್ ಚಕ್ಕೇರ ತಂಡಕ್ಕೆ ರೂ. ೫೫,೫೫೫ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಕುವೆಲೆರ ತಂಡಕ್ಕೆ ರೂ. ೩೩,೩೩೩ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ಚೆಮ್ಬಾರಂಡ ತಂಡಕ್ಕೆ ರೂ. ೨೨,೨೨೨ ನಗದು ಹಾಗೂ ಆಕರ್ಷಕ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ಕೂರಳಿಕಾರಂಡ ತಂಡಕ್ಕೆ ರೂ. ೧೧,೧೧೧ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.
ಉತ್ತಮ ಅಟ್ಯಾಕರ್ ಆಗಿ ಕುವೆಲೆರ ಗನಿ, ಉತ್ತಮ ಬ್ಲಾಕರ್ ಆಗಿ ಚಕ್ಕೇರ ಇಶಾಕ್, ಉತ್ತಮ ಅಲ್ ರೌಂಡರ್ ಆಗಿ ಕೂರಳಿಕಾರಂಡ ತಂಡದ ನಿಯಾಝ್, ಉತ್ತಮ ಸೆಟ್ಟರ್ ಆಗಿ ಚೆಮ್ಬಾರಂಡ ಸೈಫುದ್ದೀನ್, ಉತ್ತಮ ಡಿಫೆಂಡರ್ ಆಗಿ ಚಕ್ಕೇರ ರೌಫ್ ಪ್ರಶಸ್ತಿ ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭ ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಕುವೆಲೆರ ಅನೀಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಮಾರಿಜ್ ಎಂ.ಡಿ. ಡಾ. ಜಸ್ಟಿನ್ ರಾಜ್, ಅತಿಥಿಗಳಾಗಿ ಇಸ್ಮಾಯಿಲ್ ನಾಪೋಕ್ಲು, ಹರಿಶ್ಚಂದ್ರ ಹಂಸ, ಮಚ್ಚೂರ ರವಿ, ಮೂವೆರ ವಿನು, ಯುವ ಉದ್ಯಮಿಗಳಾದ ಗಫೂರ್ ಜಿಮ್ಯಾಕ್, ಕೊಪ್ಪಕ್ಕಾರಂಡ ಅಶ್ರಫ್, ಉಪಾಧ್ಯಕ್ಷ ಬೆಲಿಯತ್ಕಾರಂಡ ಸೈದು ಹಾಜಿ ಮತ್ತಿತರರು ಉಪಸ್ಥಿತರಿದ್ದರು. ತೀಪುಗಾರರಾಗಿ ರಾಜ್ಯಮಟ್ಟದ ತೀರ್ಪುಗಾರರಾದ ಸಚಿನ್ ಬೋಳಾಯಿ ಹಾಗೂ ಸಾಗರ್ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಸಈದ್, ರಫೀಕ್ ಎಡಪಾಲ ನಿರ್ವಹಿಸಿದರು.