ಮಡಿಕೇರಿ, ಮೇ. ೧೨: ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಮಸೀದಿ ಅಧೀನದಲ್ಲಿರುವ ಸಿದ್ದಾಪುರ ಮುಸ್ಲಿಂ ಅನಾಥಾಲಯ ಆರಂಭವಾಗಿ ೫೦ ವರ್ಷ ಪೂರೈಸಿದ ಹಿನ್ನೆಲೆ ತಾ. ೧೩ ಹಾಗೂ ೧೪ ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ವಿ.ಕೆ. ಬಶೀರ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಅನಾಥ ಹಾಗೂ ನಿರ್ಗತಿಕ ಬಡ ವಿದ್ಯಾರ್ಥಿಗಳಿಗೆ ಅಗತ್ಯ ಶಿಕ್ಷಣ ಒದಗಿಸುವ ಉದ್ದೇಶದಿಂದ ೧೯೭೫ರಲ್ಲಿ ಸಿದ್ದಾಪುರದಲ್ಲಿ ಮುಸ್ಲಿಂ ಅನಾಥಾಲಯವನ್ನು ಸ್ಥಾಪಿಸಲಾಯಿತು. ಯುವ ಘಟಕದ ನೇತೃತ್ವದಲ್ಲಿ ೬ ಮಕ್ಕಳೊಂದಿಗೆ ಪ್ರಾರಂಭವಾಯಿತು. ೧೯೭೯ರಲ್ಲಿ ಅನಾಥಾಲಯದ ಹೊಸ ಕಟ್ಟಡ ನಿರ್ಮಿಸಲಾಯಿತು. ಇದನ್ನು ಅಂದಿನ ಕೇರಳದ ಶಿಕ್ಷಣ ಸಚಿವರಾಗಿದ್ದ ಸಿ.ಹೆಚ್. ಮೊಹಮ್ಮದ್ ಕೋಯ ಹಾಗೂ ಕರ್ನಾಟಕ ಲೋಕೋಪಯೋಗಿ ಸಚಿವರಾಗಿದ್ದ ಗುಂಡೂರಾವ್ ಅವರು ಉದ್ಘಾಟಿಸಿದ್ದರು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಬಾಲಕರಿಗೆ ಇಲ್ಲಿ ಆಶ್ರಯ ನೀಡಿ, ಅಗತ್ಯ ಶಿಕ್ಷಣವನ್ನು ನೀಡಲಾಗಿದೆ. ಮಕ್ಕಳ ಅಧ್ಯಯನ ಪ್ರಗತಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ ಎಂದರು.

ತಾ. ೧೩ ರಂದು ಮಧ್ಯಾಹ್ನ ೩.೩೦ಕ್ಕೆ ಮಖಾಂ ಝಿಯಾರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಮರ್ಹೂಮ್ ಮಜೀದ್ ಹಾಜಿ ನಗರದಲ್ಲಿ ಮ್ಯಾನೇಜ್‌ಮೆಂಟ್ ಸಮ್ಮೇಳನ ಹಾಗೂ ರಾತ್ರಿ ೭ಕ್ಕೆ ಮರ್ಹೂಮ್ ಉಸ್ಮಾನ್ ಹಾಜಿ ವೇದಿಕೆಯಲ್ಲಿ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ನವಾಸ್ ಮನ್ನಾನಿ ಮುಖ್ಯ ಭಾಷಣ ಮಾಡಲಿದ್ದಾರೆ.

ತಾ. ೧೪ ರಂದು ಬೆಳಿಗ್ಗೆ ೧೦ ಗಂಟೆಗೆ ಮಹಿಳಾ ಸಮಾವೇಶ, ಸಂಜೆ ೪ಕ್ಕೆ ಎಸ್‌ಎಂಓ ಪೂರ್ವ ವಿದ್ಯಾರ್ಥಿಗಳ ಸಮ್ಮೇಳನ ನಡೆಯಲಿದೆ. ರಾತ್ರಿ ೭ ಗಂಟೆಗೆ ಸಮಾರೋಪ ಮಹಾಸಮ್ಮೇಳನ ನಡೆಯಲಿದ್ದು, ಕೊಡಗು ನಾಇಬ್ ಖಾಝಿ ಎಂ.ಎA. ಅಬ್ದುಲ್ ಫೈಝಿ ಪ್ರಾರ್ಥನೆ ನೆರವೇರಿಸಲಿದ್ದಾರೆ. ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಮುಸ್ತಾಫ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್‌ಎಂಓ ನಡೆದು ಬಂದ ಹಾದಿ ವಿಷಯದ ಕುರಿತು ಅಬ್ದುಲ್ ರವೂಫ್ ಹಾಜಿ ವಿಷಯ ಮಂಡಿಸಲಿದ್ದಾರೆ. ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಉದ್ಘಾಟನೆ ಮಾಡಲಿದ್ದಾರೆ. ಅನ್ವರ್ ಮುಹಿಯುದ್ದೀನ್ ಹುದವಿ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಪ್ರಸಕ್ತ ೩೮ ಬಾಲಕರು ಆಶ್ರಯ ಪಡೆದಿದ್ದು, ಇಂಗ್ಲೀಷ್ ಮಾಧ್ಯಮದಲ್ಲಿಯೇ ಶಿಕ್ಷಣವನ್ನು ನೀಡಲಾಗುತ್ತಿದೆ. ೧೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಶ್ರಯದೊಂದಿಗೆ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಬಶೀರ್ ಹೇಳಿದರು.

ಗೋಷ್ಠಿಯಲ್ಲಿ ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಮಸೀದಿಯ ಕಾರ್ಯದರ್ಶಿ ಅಬ್ದುಲ್ ರೌಫ್, ಉಪಕಾರ್ಯದರ್ಶಿ ಕೆ.ಎ. ಅಸ್ಕರ್, ಮದರಸ ಪ್ರಾಂಶುಪಾಲ ಎಂ. ಆರೀಫ್, ಸುವರ್ಣ ಮಹೋತ್ಸವ ಆಚರಣಾ ಸಮಿತಿ ಸದಸ್ಯ ಜಂಶೀರ್ ಹಾಜರಿದ್ದರು.