ಕುಶಾಲನಗರ, ಮೇ ೧೨: ೧೧ ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿ ತಗುಲಿ ಗಂಭೀರ ಗಾಯಗೊಂಡ ಬಾಲಕಿ ಸಾನ್ವಿ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಬಳಿ ತನ್ನ ತಾಯಿಯ ಜೊತೆ ಬ್ಯೂಟಿ ಪಾರ್ಲರ್‌ಗೆ ತೆರಳಿದ ಸಂದರ್ಭ ಮಹಡಿಗೆ ಹೋದ ಸಂದರ್ಭ ಕಟ್ಟಡದ ಸಮೀಪ ಹಾದುಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಶೇ. ೬೦ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾಳೆ. ಬಾಲಕಿ ಶನಿವಾರ ಸಂತೆಯಲ್ಲಿ ೬ನೇ ತರಗತಿ ವಿದ್ಯಾರ್ಥಿಯಾಗಿದ್ದು ರಜೆಯಲ್ಲಿ ತನ್ನ ತಾಯಿಯ ಬ್ಯೂಟಿ ಪಾರ್ಲರ್ ಅಂಗಡಿಗೆ ಬಂದ ಸಂದರ್ಭ ಈ ಘಟನೆ ನಡೆದಿತ್ತು.

ಕುಶಾಲನಗರ ಉಪ ವಿಭಾಗದ ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಬಾಲಕಿಯ ಚಿಕಿತ್ಸೆ ಮತ್ತು ಭವಿಷ್ಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಅಧ್ಯಕ್ಷ ದೀಪಕ್ ನೇತೃತ್ವದಲ್ಲಿ ಕುಶಾಲನಗರ ಚೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಕುಶಾಲನಗರ-ಕೂಡಿಗೆ ರಸ್ತೆಯ ಗುಮ್ಮನಕೊಲ್ಲಿ ಬಳಿ ೧೧ ಕೆ ವಿ ವಿದ್ಯುತ್ ಸರಬರಾಜು ಮಾಡುವ ಕಂಬ ಕಟ್ಟಡ ಬದಿಗೆ ವಾಲಿದ್ದು, ಈ ಹಿಂದೆ ಇದೇ ಸ್ಥಳದಲ್ಲಿ ಜಾಹೀರಾತು ಫಲಕ ಅಳವಡಿಸಲು ತೆರಳಿದ ಸಂದರ್ಭ ವಿದ್ಯುತ್ ಅವಘಡ ನಡೆದು ವ್ಯಕ್ತಿಯೊಬ್ಬರು ಅಪಾಯದಿಂದ ಪಾರಾಗಿದ್ದರು ಎಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಎಂ. ಆಸಿಫ್ ತಿಳಿಸಿದ್ದಾರೆ.ಈ ಬಗ್ಗೆ ಇಲಾಖೆಗೆ ದೂರು ನೀಡಿದರೂ ಕಂಬವನ್ನು ಸರಿಪಡಿಸುವಲ್ಲಿ ನಿರ್ಲಕ್ಷö್ಯತೋರಿದ್ದರಿಂದ ಮತ್ತೆ ಘಟನೆ ಮರುಕಳಿಸಲು ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ವಿದ್ಯುತ್ ಶಾಕ್‌ನಿಂದ ತೀವ್ರ ಘಾಸಿಗೊಂಡಿರುವ ಬಾಲಕಿಯ ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚವನ್ನು ಮತ್ತು ಆಕೆಯ ಭವಿಷ್ಯಕ್ಕೆ ನೀಡಬೇಕಾದ ಶಾಶ್ವತ ಪರಿಹಾರವನ್ನು ಇಲಾಖೆ ನೀಡಬೇಕು ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತಂತಿಗಳನ್ನು ಅಪಾಯ ಉಂಟಾಗದ ರೀತಿಯಲ್ಲಿ ಕಟ್ಟಡಗಳಿಂದ ಅಂತರದಲ್ಲಿ ಅಳವಡಿಸಬೇಕು. ಒಂದು ವಾರದ ಒಳಗೆ ಮನವಿಗೆ ಸ್ಪಂದನ ದೊರಕದಿದ್ದಲ್ಲಿ ಕುಶಾಲನಗರ ಚೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ದೀಪಕ್ ತಿಳಿಸಿದ್ದಾರೆ.

ಈ ಸಂದರ್ಭ ಮನವಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಎಸ್. ಮಂಜುನಾಥ್ ವಿದ್ಯುತ್ ಸ್ಪರ್ಶಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ತಂತಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.

ಚೆಸ್ಕಾಂ ಅಧಿಕಾರಿಗಳಾದ ಯೋಗಾಚಾರ್, ರಾಣಿ ಇದ್ದರು. ಕನ್ನಡ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಿ ಎಂ ಆಸಿಫ್, ಆನಂದ ಗೌಡ, ಯೋಗೇಶ್, ಪುನೀತ್, ಇಂಚರ, ಶ್ರುತಿ, ರೇಣುಕಾ, ಭಾಗ್ಯ ಮತ್ತಿತರರು ಹಾಜರಿದ್ದರು. ಈ ನಡುವೆ ಅವಘಡಕ್ಕೆ ಕಾರಣವಾದ ಕಂಬವನ್ನು ಚೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ದುರಸ್ತಿ ಮಾಡಲು ಕ್ರಮ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಮತ್ತು ವಿದ್ಯುತ್ ಇಲಾಖೆ ಅಧಿಕಾರಿ ಅಮಿತ್ ಮತ್ತಿತರರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.