*ಗೋಣಿಕೊಪ್ಪ, ಮೇ ೧೩: ಸಿಡಿಲು ಬಡಿದ ಪರಿಣಾಮ ಮರವೊಂದು ಚಲಿಸುತ್ತಿದ ಲಾರಿಯ ಮೇಲೆ ಬಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ೮ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.
ಲೋಡಿಂಗ್ ಕೆಲಸ ಮಾಡುತ್ತಿದ್ದ ರಾಘವೇಂದ್ರ ಎಂಬವರಿಗೆ ಈ ಘಟನೆಯಿಂದ ಮರದ ಕೊಂಬೆ ಮತ್ತು ಲಾರಿಯ ಮುಂಭಾಗದ ಗಾಜುಗಳು ಚುಚ್ಚಿ ಗಂಭೀರ ಗಾಯಗಳಾಗಿವೆ. ಉಳಿದಂತೆ ರಮೇಶ, ಮಹೇಶ, ವಿಜಿ, ಜûಹೀರ್, ರಂಗ, ಕರಿಗೌಡ, ಶಂಕರ ಇವರುಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಲಾರಿಯಲ್ಲಿದ್ದ ಗೊಬ್ಬರವನ್ನು ನಾಲ್ಕೇರಿ ಕೃಷಿಪತ್ತಿನ ಸಹಕಾರ ಸಂಘಗಳ ಗೋದಾಮಿಗೆ ಸಂಗ್ರಹಿಸಿಟ್ಟು ಹಿಂತಿರುಗುತ್ತಿದ್ದಾಗ ನಾಲ್ಕೇರಿ, ಗೋಣಿಕೊಪ್ಪ ಮಾರ್ಗದ ನಡುವೆ ಈ ಘಟನೆ ನಡೆದಿದೆ. ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಲಾರಿಯ ಮಾಲೀಕರು ಗಾಯಾಳುಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.