ವೀರಾಜಪೇಟೆ, ಮೇ ೧೪: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕ್ಕಾಡುವಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯನ್ನು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಬಾರಿಕಾಡು ನಿವಾಸಿಗಳ ಕೋರಿಕೆ ಮೇರೆಗೆ, ಈ ಹಿಂದೆ ಶಾಸಕರು ಇಲ್ಲಿನ ಹಲವು ರಸ್ತೆಗಳನ್ನು ಉನ್ನತೀಕರಣಗೊಳಿಸಲು ರೂ. ೩೦ ಲಕ್ಷ ಅನುದಾನವನ್ನು ಒದಗಿಸಿದ್ದರು. ಇತ್ತೀಚೆಗಷ್ಟೇ ಎಲ್ಲಾ ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, ಶಾಸಕರು ನೂತನ ರಸ್ತೆಗಳನ್ನು ಉದ್ಘಾಟಿಸಿ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ವೇಳೆ ವಿವಿಧ ಕಡೆಗಳಲ್ಲಿ ತೋಟ ಕಾರ್ಮಿಕರಾಗಿ ದುಡಿಯುತ್ತಿದ್ದ ಕಾರ್ಮಿಕರುಗಳು ಬಾರಿಕ್ಕಾಡು ಪೈಸಾರಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ನೂತನವಾಗಿ ಸರಕಾರದ ವತಿಯಿಂದ ಮನೆ ನಿರ್ಮಿಸಲಾಗಿದ್ದು, ಇನ್ನೂ ಹಸ್ತಾಂತರವಾಗಿಲ್ಲ. ಈ ಬಗ್ಗೆ ನಿರಾಶ್ರಿತ ಕಾರ್ಮಿಕ ವರ್ಗ ಶಾಸಕರಲ್ಲಿ ಅಳಲು ತೋಡಿಕೊಂಡಿತು. ಈ ಸಂದರ್ಭ ಶಾಸಕರು ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ. ಮುಂದಿನ ತಿಂಗಳು ಮನೆ ಹಸ್ತಾಂತರ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕೆಡಿಪಿ ಸದಸ್ಯ ಮಾಳೇಟಿರ ಪ್ರಶಾಂತ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಫೀಕ್, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಬೂತ್ ಅಧ್ಯಕ್ಷ ವಿಜಯ್ ಕುಮಾರ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೆಫ್ರೀ ಉತ್ತಪ್ಪ, ಇಸ್ಮಾಯಿಲ್, ಆಲಿ, ಮಾಳೇಟಿರ ಶುಭ ಸುಬ್ಬಯ್ಯ, ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಜಿತನ್, ಡ್ಯಾನಿ, ಪಾಲಂಗಾಲ ಬೂತ್ ಅಧ್ಯಕ್ಷ ಜಾಲು ಚಂಗಪ್ಪ, ಮಿಟ್ಟು ಅಯ್ಯಪ್ಪ, ಸ್ಥಳೀಯರಾದ ವಿ.ಟಿ. ನಾರಾಯಣ, ಹರಿದಾಸ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.