ನಾಪೋಕ್ಲು, ಮೇ ೧೭: ಇಲ್ಲಿಗೆ ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಭಾನುವಾರ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು.

ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಪ್ರಾರಂಭಗೊAಡ ಹೋಮ ಹವನಗಳು ಮುಂದುವರೆದ ಭಾಗವಾಗಿ ಭಾನುವಾರ ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ ಅಂಕುರ ಪೂಜೆ ಅನುಜ್ಞಾ ಕಲಶ ಪೂಜೆ, ಆದಿವಾಸ ಹೋಮ, ಪರಿಕಲಶ ಪೂಜೆ, ಬ್ರಹ್ಮ ಕಳಸ ಪೂಜೆ, ಕಲಶಾದಿವಾಸ, ಮಧ್ಯಾಹ್ನ ಪೂಜಾ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಬಳಿಕ ರಾತ್ರಿ ದುರ್ಗಾ ನಮಸ್ಕಾರ ಪೂಜೆ ಜರುಗಿತು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಸದಸ್ಯರು, ಭಕ್ತ ಜನ ಸಂಘದ ಅಧ್ಯಕ್ಷ ಸುಮನ್ ಸುಬ್ರಮಣಿ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಹಾಜರಿದ್ದರು.

ಸೋಮವಾರ ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ಎಂಟು ಗಂಟೆಗೆ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಅಷ್ಟಬಂಧ ಲೇಪನ, ಮುಂದುವರೆದು ಪರಿಕಲಶಾಭಿಷೇಕ, ಬ್ರಹ್ಮಕಲಸ ಅಭಿಷೇಕ, ೧೨ ಗಂಟೆಗೆ ಮಧ್ಯಾಹ್ನದ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಹಾಗೂ ಮಂತ್ರಾಕ್ಷತೆ ಮತ್ತು ಅನ್ನಸಂತರ್ಪಣೆ ಜರುಗಲಿದೆ. ಕಳಶ ಪೂಜೆ ಮಾಡಿಸಿದವರು ಕಲಶ ಪೂಜೆಯ ರಶೀದಿಯನ್ನು ತೋರಿಸಿ ಪ್ರಸಾದವನ್ನು ಪಡೆಯತಕ್ಕದ್ದು ಎಂದು ವ್ಯವಸ್ಥಾಪನಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

-ದುಗ್ಗಳ ಸದಾನಂದ