ಮಡಿಕೇರಿ, ಮೇ ೧೭: ಹತ್ತುಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳಲ್ಲಿ ನಡೆಯುತ್ತಿದ್ದ ೧೬ ದಿನದ ಕ್ರೀಡಾಕೂಟಕ್ಕೆ ತೆರೆಬಿದ್ದಿದ್ದು ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭ ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಗಣ್ಯರು ದೀಪಬೆಳಗುವ ಮೂಲಕ ನೆರವೇರಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಮಾತನಾಡಿ ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಈ ಬಾರಿ ಕ್ರೀಡಾಕೂಟದೊಂದಿಗೆ ಆಯೋಜಿಸಲಾಗಿದ್ದ ಮಿಸ್ಟರ್ ಗೌಡ ಹಾಗೂ ಮಿಸ್ ಗೌಡತಿ ವಿನೂತನ ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿ ಬಂದಿದೆ. ೧೬ ದಿನಗಳ ಕ್ರೀಡಾಕೂಟ ಬಹಳ ಅದ್ಧೂರಿಯಾಗಿ ನಡೆದಿದ್ದು ಈ ರೀತಿಯ ಕಾರ್ಯಕ್ರಮಗಳಿಗೆ ತನ್ನ ಸಹಕಾರ ಇರಲಿದೆ ಎಂದರು.

ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಮಾತನಾಡಿ, ಕೊಡಗು ಗೌಡ ಯುವ ವೇದಿಕೆ ಕ್ರೀಡಾಕೂಟ ಆಯೋಜನೆ ಮಾಡುತ್ತಾ ಯುವಕರನ್ನು ಒಂದುಗೂಡಿಸುತ್ತಾ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಕೃತಿ ಆಚಾರ ವಿಚಾರವನ್ನು ಪರಿಚಯಿಸುವ ಕೆಲಸವನ್ನು ಯುವ ವೇದಿಕೆ ಮಾಡಬೇಕು ಎಂದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಎಸ್.ಸುರೇಶ್ ನಂಜಪ್ಪ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸ ಆಗಬೇಕು. ಕೊಡಗು ಕೊಡಗಾಗಿಯೆ ಉಳಿಯಬೇಕು ಯಾರು ಕೂಡ ವಿಷ ಬೀಜ ಬಿತ್ತಬಾರದು, ಬಿತ್ತುವವರನ್ನು ಹತ್ತಿರ ಸೇರಿಸಬಾರದೆಂದು ಕರೆ ನೀಡಿದರು.

ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಮಾತನಾಡಿ ಗಾಳಿಬೀಡಿನಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಳಿಕ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ೧೬ ದಿನಗಳ ಕಾಲ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಿದ್ದೇವೆ. ಮುಂದೆಯೂ ಕೂಡ ಎಲ್ಲರ ಸಹಕಾರ ಇರಲೆಂದು ಆಶಿಸಿದರು.

ವೇದಿಕೆಯಲ್ಲಿ ಪ್ರಮುಖರಾದ ಕುಂಬುಗೌಡನ ಸೋಮಣ್ಣ, ನವೀನ್ ಅಂಬೆಕಲ್ಲು, ತೆಕ್ಕಡೆ ಪ್ರಜ್ವಲ್, ಹೊನ್ನಂಪಾಡಿ ಅಂಕಿತ ಸುರೇಶ್, ಮೂಟೇರ ಪುಷ್ಪಾವತಿ, ಪೊನ್ನಚನ ಮಧು, ಎಡಿಕೇರಿ ಪ್ರಸನ್ನ, ಪಾರೆಮಜಲು ಪ್ರದೀಪ್ ಪೈಕೇರ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.