ಮಡಿಕೇರಿ, ಮೇ ೨೦ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸರ್ಕಾರಿ ಶುಶ್ರೂಷಾ ಕಾಲೇಜಿನಲ್ಲಿ ಉಪಶಮನ ಆರೈಕೆ ಕಾರ್ಯಾಗಾರ ಉದ್ಘಾಟಿಸಲಾಯಿತು. ಗಂಭೀರ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೋವು, ರೋಗಲಕ್ಷಣಗಳು ಮತ್ತು ಒತ್ತಡವನ್ನು ನಿವಾರಿಸುವ ಮೂಲಕ ಅವರ ಕುಟುಂಬದ ಜೀವನ ಗುಣಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಂಡಿದ್ದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ. ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ನರ್ಸಿಂಗ್ ಕಾಲೇಜಿನಿಂದ ಇದೇ ತರದ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲು ಪ್ರೇರೇಪಣೆ ನೀಡಿ ಶುಭ ಹಾರೈಸಿದರು
ಸರ್ಕಾರಿ ಶುಶ್ರೂಷಾ ಕಾಲೇಜಿನ ಸಹ ಪ್ರಾಧ್ಯಾಪಕ ಗುರುಪಾದ ಕೆ.ಪಿ. ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಂಶುಪಾಲೆ ಮಂಜುಳ ಎ.ಕೆ. ಉಪಶಮನ ಆರೈಕೆ ಕಾರ್ಯಾಗಾರದ ಮಹತ್ವವನ್ನು ವಿವರಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲ ಡಾ. ನರಸಿಂಹ ರೈ ಮಾತನಾಡಿ ಇಂತಹ ಕಾರ್ಯಗಾರಗಳಿಂದ ಹೆಚ್ಚಿನ ವಿಷಯಗಳನ್ನು ಗ್ರಹಿಸಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಉಪಶಮನ ಆರೈಕೆ ನೀಡುವುದರ ಜೊತೆಗೆ ರೋಗಿಗಳ ಕುಟುಂಬದವರನ್ನು ಸಹ ಆರೈಕೆಯಲ್ಲಿ ಜೊತೆಗೂಡಿಸಿ ಕೊಳ್ಳಬಹುದೆಂದು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ರವಿಕಿರಣ್ ಕಿಶಾನ್ ಇಂತಹ ವಿವಿಧ ವಿಷಯಗಳ ಬಗ್ಗೆ ಕಾರ್ಯಗಾರ ಗಳಿಂದ ಸಮಾಜದಲ್ಲಿ ಉಪಶಮನ ಆರೈಕೆ ನೀಡುವಲ್ಲಿ ಇಂದಿನ ಯುವ ಪೀಳಿಗೆಗೆ ಭದ್ರ ಬುನಾದಿ ಹಾಕಬಹುದೆಂದು ತಿಳಿಸಿದರು.
ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರಾಧಿಕಾ ಆರ್ ಪೈ ಸಹಾಯಕ ಪ್ರಾಧ್ಯಾಪಕರು ಹಾಗೂ ಡಾ. ಮಾಲತಿ ಜಿ ನಾಯಕ್ ಪ್ರಾಧ್ಯಾಪಕರು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮಾಹೆ ಮಣಿಪಾಲ್ ರವರು ಎರಡು ದಿನಗಳು ವಿಧ್ಯಾರ್ಥಿಗಳಿಗೆ ಉಪಶಮನ ಆರೈಕೆ ಬಗ್ಗೆ ಸಂಕ್ಷಿಪ್ತವಾಗಿ ವಿಷಯ ಮಂಡಿಸಲಿದ್ದಾರೆ.
ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ರೋಹಿಣಿ ಕೆ ಎಂ, ಸರ್ಕಾರಿ ಶುಶ್ರೂಷಾ ಕಾಲೇಜಿನ ಬೋಧಕ ವೃಂದದವರು, ಆಸ್ಪತ್ರೆಯ ಸಿಬ್ಬಂದಿಗಳು, ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸರ್ಕಾರಿ ಶುಶ್ರೂಷಾ ಕಾಲೇಜಿನ ವಿದ್ಯಾರ್ಥಿ ಆಶಿತಾ ಪ್ರಾರ್ಥನೆ ಹಾಗೂ ಕುಮಾರಿ ರಮ್ಯಾ ವಂದಿಸಿದರು.