ಸೋಮವಾರಪೇಟೆ, ಮೇ ೨೧ : ಮಲೆನಾಡ ಸ್ವರ್ಗ ತಂಡದ ವತಿಯಿಂದ ಪಟ್ಟಣದ ಚನ್ನಬಸಪ್ಪ ಹಾಲ್‌ನ ಮುಂದಿನ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಚನ್ನಬಸಪ್ಪ ಹಾಲ್‌ನಿಂದ ಕುವೆಂಪು ವಿದ್ಯಾಸಂಸ್ಥೆಯವರೆಗೆ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಹಾಕಲಾಗಿತ್ತು. ವಿದ್ಯಾರ್ಥಿಗಳು ಅದೇ ರಸ್ತೆಯಲ್ಲಿ ತಿರುಗಾಡಬೇಕಿತ್ತು. ಇದನ್ನು ಗಮನಿಸಿದ ತಂಡದ ಸದಸ್ಯರು ಕಸವನ್ನು ಹೆಕ್ಕಿ ತೆಗೆದು ರಸ್ತೆ ಬದಿಯಲ್ಲಿ ಸ್ವಚ್ಛಗೊಳಿಸಿದರು.

ಪರಿಸರ ಸ್ವಚ್ಛವಾಗಿಡುವುದು ಕೇವಲ ಕೆಲಸವಲ್ಲ, ಇದು ನಮ್ಮ ಮುಂದಿನ ಪೀಳಿಗೆಗೆ ನೀಡುವ ಉಡುಗೊರೆ ಎಂದು ಭಾವಿಸಬೇಕಾಗಿದೆ ಎಂದು ತಂಡದ ಸದಸ್ಯ ಬಿನುಗೌಡ ಹೇಳಿದರು.

ಪ್ರತಿಯೊಂದು ಕಸ ನೈಸರ್ಗಿಕ ಸೌಂದರ್ಯ ವನ್ನು ಹಾಳು ಮಾಡುತ್ತದೆ. ಅದನ್ನು ತಪ್ಪಿಸುವುದು ನಮ್ಮಿಂದಲೇ ಸಾಧ್ಯ ಎಂದು ಸದಸ್ಯ ಧೀರಜ್ ಹೇಳಿದರು. ತಂಡದ ಸದಸ್ಯರಾದ ಗಗನ್, ಶಶಾಂಕ್, ಅಕುಲ್, ನಿಕೃತ್, ಸಂರುತ್, ಸಹನಾ, ಸೌರವಿ, ಬಿಂದು ಮತ್ತಿತರರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.