ಮಡಿಕೇರಿ, ಮೇ ೨೧; ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗೋಕುಲಂ ಎಂಬ ಹಣಕಾಸು ಸಂಸ್ಥೆಯ ಕಚೇರಿಗಳಲ್ಲಿ ಆಂಗ್ಲ ಭಾಷೆ ಬಳಕೆಗೆ ಬದಲಾಗಿ ಕನ್ನಡ ಭಾಷೆ ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.
ಕೊಡಗು ಜಿಲ್ಲೆಯ ವಿವಿಧೆಡೆ ಗೋಕುಲಂ ಎಂಬ ಹಣಕಾಸು ಸಂಸ್ಥೆ ಕಚೇರಿಗಳನ್ನು ಹೊಂದಿದ್ದು, ಸಂಸ್ಥೆಯಲ್ಲಿ ಸಣ್ಣ, ಬೀದಿ ವ್ಯಾಪಾರಿಗಳು ಸೇರಿದಂತೆ ನಾಗರಿಕರು ಹಣ ಹೂಡಿಕೆ ಮಾಡಿರುತ್ತಾರೆ. ಸಂಸ್ಥೆಯು ಇವರುಗಳೊಂದಿಗೆ ವ್ಯವಹರಿಸುವಾಗ ಕೇವಲ ಆಂಗ್ಲ ಭಾಷೆಯನ್ನು ಬಳಸುತ್ತಿದ್ದು, ಇದರಿಂದ ಆರ್ಥಿಕವಾಗಿ ದುರ್ಬಲರಾದ ಅನೇಕ ವ್ಯಾಪಾರಿಗಳಿಗೆ ತೊಂದರೆಯುAಟಾಗುತ್ತಿದ್ದು, ಕನ್ನಡದಲ್ಲಿ ಅರ್ಜಿ ನಮೂನೆಗಳನ್ನು ಮುದ್ರಿಸುವಂತೆ ಕನ್ನಡ ಜಾಗೃತಿ ಸಮಿತಿ ಸದಸ್ಯ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಸಂಸ್ಥೆಯವರಲ್ಲಿ ಮನವಿ ಮಾಡಿಕೊಂಡ ಸಂದರ್ಭ ಸಂಸ್ಥೆಯವರು ಕೇಂದ್ರ ಕಚೇರಿ ಚೆನ್ನೆöÊನಲ್ಲಿರುವದರಿಂದ ಸಾಧ್ಯವಿಲ್ಲವೆಂದು ನಿರಾಕರಿಸಿದ್ದರು.
ಈ ಬಗ್ಗೆ ಲೋಕೇಶ್ ಸಾಗರ್ ಸರಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಪಂದಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು; ಈ ಬಗ್ಗೆ ಕೂಡಲೇ ಕಾರ್ಯೋನ್ಮುಖರಾಗಿ ಸಂಸ್ಖೆಗೆ ಕಠಿಣ ನಿರ್ದೇಶನ ನೀಡುವದರೊಂದಿಗೆ ಕಾಲಮಿತಿಯಲ್ಲಿ ಕನ್ನಡ ಬಳಕೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯ ನಿರ್ಮಾಣಕ್ಕೆ ಮುಂದಾಗಬೇಕು. ಕೈಗೊಂಡ ಕ್ರಮದ ಬಗ್ಗೆ ಶೀಘ್ರದಲ್ಲಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕ ಟಿ.ಹಚ್.ಎಂ. ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.