ವೀರಾಜಪೇಟೆ, ಮೇ ೨೨: ಸಕಲ ಜೀವಾತ್ಮರಿಗೆ ಒಳಿತನ್ನೆ ಬಯಸುವಂತ ಬಸವೇಶ್ವರ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತಾಗಬೇಕು ಎಂದು ಅರಮೇರಿ ಕಳಂಚೇರಿ ಮಠಾಧೀಶರು ಹಾಗೂ ವೀರಶೈವ ಮಹಾಸಭಾ ಸಮಾಜದ ಗೌರವ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ಆಯೋಜಿಸಲಾಗಿದ್ದ ೨೦೨೬ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ‘ಬಸವ ಜಯಂತಿ ಆಚರಣೆ ಸಮಾರಂಭ’ದ ಸಾನಿಧ್ಯ ವಹಿಸಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಲೇಸನ್ನೆ ಬಯಸಿದಂತ ಬಸವಣ್ಣನವರ ತತ್ವಗಳು ಯಾರಿಗೂ ವಿರೋಧವಾಗಿಲ್ಲ. ಆದ್ದರಿಂದ ವಿಶ್ವದ ಎಲ್ಲಾ ಕಡೆಗಳಲ್ಲಿಯು ಬಸವಣ್ಣನವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಮನೆಹಳ್ಳಿ ತಪೋಕ್ಷೇತ್ರ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವೇಶ್ವರವರ ೧೨೫ನೇ ವರ್ಷಾಚರಣೆ ನಡೆಸುತ್ತಿದ್ದೇವೆ. ಯಾರು ತಮ್ಮ ಬದುಕಿನಲ್ಲಿ ಮಹಾತ್ಮರನ್ನು ನೆನಪಿಸಿಕೊಳ್ಳುತ್ತಾರೊ ಅಂತವರು ಜೀವನದಲ್ಲಿ ಶಾಂತಿ ನೆಮ್ಮದಿಯಿಂದ ಬದುಕುತ್ತಾರೆ. ಬಸವಣ್ಣನ ತತ್ವಗಳು ಎಂದೆAದಿಗೂ ಒಂದೆ, ಈ ಹಿಂದೆ ಕೊಡಗಿನಲ್ಲಿ ೪೩ ಮಠಗಳಿದ್ದವು. ಆದರೆ ಇತ್ತೀಚೆಗೆ ಸಂಖ್ಯೆ ಕಡಿಮೆಯಾಗಿ ೧೩ ಮಠಗಳಿವೆ. ಯಾವುದೇ ವಿಚಾರಗಳು ಉಪದೇಶ ಮಾತ್ರವಲ್ಲದೆ ಆಚರಣೆಯಲ್ಲಿರಬೇಕು. ಸಮಾಜದ ಮೂಲತತ್ವ ಮಠಗಳು ಎಲ್ಲರನ್ನು ಆಕರ್ಷಕ ಮಾಡುತ್ತದೆ. ಎಲ್ಲಾ ಮಠಗಳ ರಕ್ಷಣೆ, ಪರಮ ಪೂಜ್ಯರನ್ನು ನೆನಪಿಸುವಂತ ಕಾರ್ಯ ಆಗಬೇಕು. ಸಂಸ್ಕಾರ, ಆಚಾರ, ವಿಚಾರಗಳ ಅವಶ್ಯವಿರುವುದಾಗಿ ಮಹಾಂತ ಶಿವಲಿಂಗಸ್ವಾಮೀಜಿ ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಸದಸ್ಯರಾದ ಅನುರಾಧ ಚಂದ್ರಶೇಖರ್ ಮಾತನಾಡಿ, ವೀರಶೈವ ಸಮಾಜದ ಬಾಂಧವರು ಸಂಘಟನೆ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಹಾಗೂ ಮಕ್ಕಳಿಗೆ ವಚನಗಳನ್ನು ಕಲಿಸುವಂತಾಗಬೇಕು. ಕೊಡಗಿನ ವೀರಾಜಪೇಟೆ ತಾಲೂಕಿನಲ್ಲಿ ವೀರಶೈವ ಸಮಾಜದ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಘಟಕದ ಅಧ್ಯಕ್ಷ ಎನ್.ಎಂ ರಾಜೇಶ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ವೀರಶೈವ ಸಮಾಜ ಬಾಂಧವರು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸದಸ್ಯತ್ವ ಪಡೆದುಕೊಂಡು ಮುಂದೆಯು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಪ್ರೋತ್ಸಾಹ ನೀಡುವಂತಾಗಬೇಕು ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ದೀಪಿಕ ಕರ್ಣ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಚಂಪ ಉಮೇಶ್ ಮತ್ತು ಎಸ್.ಎಸ್ ಸುರೇಶ್ ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.

ದಿ.ಟಿ.ಯು. ರಾಜ್ಯಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಪದಕ ಹಾಗೂ ಬಹುಮಾನ ಪಡೆದ ವಿದ್ಯಾರ್ಥಿ ಎ.ಆರ್ ಅಕ್ಷಯ್ ಮತ್ತು ೭ನೇ ತರಗತಿ, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಪೊನ್ನಂಪೇಟೆ-ವೀರಾಜಪೇಟೆ ವೀರಶೈವ ಸಮಾಜದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜದ ತಾಲೂಕು ಉಪಾಧ್ಯಕ್ಷ ಶ್ರೀಕಂಠಪ್ಪ (ರಘು), ಬೆಂಗಳೂರು ವಿದ್ಯಾರ್ಥಿ ಪ್ರದೀಪ್, ಕಾರ್ಯದರ್ಶಿ ವೇದಾ ಜಯರಾಜು, ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.