ವೀರಾಜಪೇಟೆ, ಮೇ ೨೪: ಹಬ್ಬ ಹರಿದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರು ಶಾಂತಿ ಮತ್ತು ಸೌಹಾರ್ದತೆಯಿಂದ ಉತ್ಸವಗಳನ್ನು ಆಚರಿಸುವಂತಾಗಬೇಕು ಎಂದು ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಹೇಳಿದರು.

ತಾ, ೨೮ ರಂದು ನಡೆಯಲಿರುವ ಬಕ್ರೀದ್ ಹಬ್ಬದ ಪ್ರಯುಕ್ತ ಮುಂಜಾಗೃತ ಕ್ರಮವಾಗಿ ವೃತ್ತ ನಿರೀಕ್ಷಕರ ಕಛೇರಿ ಸಭಾಂಗಣದಲ್ಲಿ ನಡೆದ ಉಪವಿಭಾಗ ಮಟ್ಟದ ವೀರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಮತ್ತು ಕುಟ್ಟ ಮಸಿದೀಗಳ ಮುಖಂಡರುಗಳಿಗೆ ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಕ್ರೀದ್ ಹಬ್ಬದ ಸಂದರ್ಭ ಅಕ್ರಮ ಜಾನುವಾರು ಸಾಗಾಟ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಾಜ್ಯ ಮತ್ತು ಜಿಲ್ಲಾ ವ್ಯಾಪ್ತಿಯ ಚೆಕ್‌ಪೋಸ್ಟ್ ಗಳಲ್ಲಿ ನಿಗಾವಹಿಸಲಾಗಿದೆ ಎಂದು ಮಹೇಶ್ ಕುಮಾರ್ ತಿಳಿಸಿದರು. ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ ಎಲ್ಲರು ಸೇರಿ ಒಗ್ಗಟ್ಟಿನಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತಾಗಬೇಕು ಎಂದರು. ಶಾಂತಿ ಸಭೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿಗಳಾದ ಹೆಚ್.ಎಸ್.ಪ್ರಮೋದ್, ಲತಾ, ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸಭೆಯಲ್ಲಿ ಮಸೀದಿಗಳ ಮುಖಂಡರುಗಳು ಮತ್ತಿತರರು ಭಾಗವಹಿಸಿದ್ದರು.