ವೀರಾಜಪೇಟೆ, ಮೇ ೨೪: ಜಿಲ್ಲಾ ಕೇಂದ್ರಗಳಲ್ಲಿ ಸಿಐಟಿಯು ಸಂಘಟನೆಯನ್ನು ಬಲಪಡಿಸುವ ಹಾಗೂ ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡಗು ಜಿಲ್ಲಾ ಸಿಐಟಿಯು ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಧರ್ಮೇಶ್, ಕಾರ್ಮಿಕರ ಕನಿಷ್ಟ ವೇತನವನ್ನು ರೂ ೩೬ ಸಾವಿರಕ್ಕೆ ಹೆಚ್ಚಿಸಬೇಕು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ತಾ. ೩೦ ರಂದು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ದೇಶದ ಆರ್ಥಿಕ ಕುಸಿತ ಹಾಗೂ ಹೆಚ್ಚುತ್ತಿರುವ ಅಸಮಾನತೆ ಕುರಿತು ದಿಕ್ಸೂಚಿ ಭಾಷಣ ಮಾಡಿದ ಧರ್ಮೇಶ್ ಅವರು, ಪ್ರಸ್ತುತ ದೇಶವು ತೀವ್ರ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ತಪುö್ಪ ನೀತಿಗಳಿಂದಾಗಿ ದೇಶದಲ್ಲಿ ಉತ್ಪಾದನಾ ವಲಯ ಸಂಪೂರ್ಣವಾಗಿ ಕುಸಿದಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದೇಶದ ಆರ್ಥಿಕತೆ ಮುನ್ನಡೆಯುತ್ತಿದೆ ಎಂಬ ಸರ್ಕಾರದ ವಾದ ಸುಳ್ಳಾಗಿದ್ದು, ಅಂತರರಾಷ್ಟಿçÃಯ ಸಂಸ್ಥೆಗಳೇ ಭಾರತದ ಜಿಡಿಪಿ ಲೆಕ್ಕಾಚಾರ ತಪ್ಪಾಗಿದೆ ಎಂದು ಬಹಿರಂಗಪಡಿಸುತ್ತಿವೆ. ಕೇಂದ್ರ ಸರಕಾರದ ೮ನೇ ವೇತನ ಆಯೋಗವೇ ತನ್ನ ನೌಕರರಿಗೆ ಕನಿಷ್ಠ ೬೯,೦೦೦ ವೇತನ ಶಿಫಾರಸು ಮಾಡಿರುವಾಗ, ಕಾರ್ಮಿಕರಿಗೆ ೩೬,೦೦೦ ಕೇಳುವುದು ಸಂಪೂರ್ಣ ನ್ಯಾಯಯುತವಾಗಿದೆ ಎಂದು ಧರ್ಮೇಶ್ ತಿಳಿಸಿದರು.
ಸರಕಾರ ತಂದಿರುವ ೪ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮುಷ್ಕರ ಮಾಡುವ ಹಕ್ಕಿನಿಂದ ವಂಚಿತಗೊಳಿಸಿ, ಅವರನ್ನು ಮಾಲೀಕರ ಗುಲಾಮರನ್ನಾಗಿ ಮಾಡಲು ಹೊರಟಿವೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಸರಕಾರ ಧರ್ಮ, ಜಾತಿ ಹಾಗೂ ಕೋಮು ರಾಜಕಾರಣವನ್ನು ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ವೇತನಕ್ಕೆ ಆಗ್ರಹಿಸಿ ಕೊಡಗು ಜಿಲ್ಲೆಯಾದ್ಯಂತ ಪ್ರತಿ ಸಿಐಟಿಯು ಸದಸ್ಯರು ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಬೃಹತ್ ಜನಾಂದೋಲನ ರೂಪಿಸಬೇಕು. ತಾ. ೩೦ ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಕಾರ್ಮಿಕರನ್ನು ಒಂದುಗೂಡಿಸಿ ಸರಕಾರದ ಮೇಲೆ ತೀವ್ರ ಒತ್ತಡ ತರಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್ ಅವರು ಜಿಲ್ಲೆಯ ಸಂಘಟನಾ ಯೋಜನೆಯನ್ನು ಮಂಡಿಸಿದರು. ವೇದಿಕೆಯಲ್ಲಿ ಅಂಗನವಾಡಿ ನೌಕರರ ಸಂಘದ ಸುಮಿತ್ರಾ, ಹಮಾಲಿ ಕಾರ್ಮಿಕರ ಸಂಘದÀÀ ಶಾಜಿ ರಮೇಶ್, ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ಉಪಸ್ಥಿತರಿದ್ದರು.