ಮಡಿಕೇರಿ, ಮೇ ೨೫: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡವಾಳಶಾಹಿಗಳ ಪರವಾಗಿ ಹಾಗೂ ಕಾರ್ಮಿಕರಿಗೆ ತೊಂದರೆಯಾಗುವ ಮಸೂದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಇದಕ್ಕೆ ಎಲ್ಲೆಡೆ ತೀವ್ರತರವಾದ ಆಕ್ಷೇಪ ಉಂಟಾದರೂ ಕಿವಿಗೊಡದೇ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ ಎಂದರು.

ಅಮೇರಿಕ-ಇರಾನ್ ಸಂಘರ್ಷದ ವೇಳೆ ಗಲ್ಫ್ನಲ್ಲಿ ಸಾಕಷ್ಟು ಮಂದಿ ಭಾರತದಿಂದ ಹೋಗಿದ್ದ ಕಾರ್ಮಿಕರು ಸಮಸ್ಯೆಗಳಿಗೆ ಸಿಲುಕಿದರು. ಅವರ ಒಂದೂ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಆಲಿಸಲಿಲ್ಲ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಸೃಷ್ಟಿಯಾಗಿದೆ. ಅಡುಗೆ ಅನಿಲ ದೊರೆಯುತ್ತಿಲ್ಲ. ಇಂತಹ ಸಂಕಷ್ಟದ ಸನ್ನಿವೇಶದಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶದ ಪ್ರವಾಸ ಮಾಡುತ್ತಿದ್ದಾರೆ. ದೇಶದ ಜನರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನೀಡಿದ ಗ್ಯಾರಂಟಿಗಳನ್ನು ಬಿಜೆಪಿ ಉತ್ತರದ ರಾಜ್ಯಗಳಲ್ಲಿ ಜಾರಿಗೆ ತರುತ್ತಿದೆ. ಇಲ್ಲಿ ಜಾರಿಗೆ ಮಾಡಲು ಮುಂದಾದಾಗ ಹುಸಿ ಆರೋಪಗಳನ್ನು ಬಿಜೆಪಿ ಮಾಡಿತ್ತು. ಈಗ ನಮ್ಮ ಗ್ಯಾರಂಟಿಗಳನ್ನು ನಕಲು ಮಾಡುತ್ತಿದೆ ಎಂದು ಹೇಳಿದರು.

ನಾನೀಗ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ, ಎಲ್ಲ ಜಿಲ್ಲೆಗಳ ಕಾರ್ಮಿಕ ಸಂಘಟನೆಗಳೊAದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ನೀಡಬೇಕಾದ ವೇತನದ ಕುರಿತು ಸಲಹೆ ನೀಡುವೆ ಎಂದು ಪ್ರತಿಕ್ರಿಯಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ತೆನ್ನಿರಾ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ದಿನೇಶ್ ಶೆಟ್ಟಿ ಹಾಗೂ ಜಗದೀಶ್ ಭಾಗವಹಿಸಿದ್ದರು.