ಚೆಯ್ಯಂಡಾಣೆ, ಮೇ.೨೫: ವೀರಾಜಪೇಟೆಯ ಪುರಭವನದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘದ (ರಿ) ಒಂಬತ್ತನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಮತ್ತು ಚುನಾವಣೆಯ ಪ್ರಕ್ರಿಯೆಯು ಕೊಡಗು ಜಿಲ್ಲಾ ಕಿವುಡರ ಸಂಘದ (ರಿ ) ಗೌರವಾಧ್ಯಕ್ಷ ಜೋಸೆಫ್ ಸ್ಯಾಮ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷರಾದ ಮಾತಂಡ ಗೌರು ಸೋಮಣ್ಣ, ಸಂಘದ ಸರ್ವ ಸದಸ್ಯರ ಉಪಸ್ಥಿತಿ ಮತ್ತು ಭಾಗವಹಿಸುವಿಕೆ ನಮ್ಮ ಸಂಘಕ್ಕೆ ಶಕ್ತಿ ತುಂಬುತ್ತದೆ ಎಂದರು. ಕಳೆದ ಸಾಲಿನಲ್ಲಿ ಸರ್ವರೂ ಒಟ್ಟುಗೂಡಿ ಸಮರ್ಪಣಾ ಭಾವದಿಂದ ಒಟ್ಟಾಗಿ ಸೇವೆ ಸಲ್ಲಿಸಿದ್ದನ್ನು ಶ್ಲಾಘಿಸಿದರು.
ಸೆಪ್ಟೆಂಬರ್ ೧೯ ರಂದು ನಡೆದ ಕರ್ನಾಟಕ ಕಿವುಡರ ಮಕ್ಕಳ ಕ್ರೀಡಾಕೂಟವು ಗೌರವ ಅಧ್ಯಕ್ಷರಾದ ಜೋಸೆಫ್ ಸ್ಯಾಮ್ ಅವರ ಕಠಿಣ ಪರಿಶ್ರಮದಿಂದ ಹಾಗೂ ದಾನಿಗಳ ನೆರವಿನಿಂದ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಗೌರವಾಧ್ಯಕ್ಷ ಜೋಸೆಫ್ ಸ್ವಾಮ್ ಮಾತನಾಡಿ, ಸಂಘದ ಸದಸ್ಯರ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಆಯಿಷಾ ಅವರು ಮಾತನಾಡಿ, ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿಯ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿ, ಈಗಾಗಲೇ ಅಧ್ಯಕ್ಷರಾದ ಗೌರು ಸೋಮಣ್ಣ ಅವರು ಅವಿರೋಧವಾಗಿ ಪುನಃ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು ಅವರ ಸೇವಾ ಅವಧಿಯಲ್ಲಿ ಇನ್ನಷ್ಟು ಹೆಚ್ಚು ಒಳ್ಳೆಯ ಕಾರ್ಯಗಳು ನಡೆಯಲಿ ಎಂದರು.
ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಇನ್ನೂ ಸಹ ಸದಸ್ಯತ್ವವನ್ನು ಪಡೆಯದಿರುವವರನ್ನು ಗುರುತಿಸಿ ಕೆಡಿಡಿಎಯಲ್ಲಿ ಸದಸ್ಯತ್ವವನ್ನು ನೀಡಿ ಸರ್ಕಾರದಿಂದ ಸಿಗುವಂತಹ ಸೌಲಭ್ಯವನ್ನು ಪಡೆದುಕೊಳ್ಳಬೇಕಿದೆ. ಮೈಸೂರಿನಲ್ಲಿ ಕಿವುಡರಿಗಾಗಿ ವಸತಿ ಶಾಲೆ ಇದೆ. ಅಲ್ಲಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಸಮಾಜದಲ್ಲಿ ವಿಶೇಷಚೇತನರಿಗೆ ನಮ್ಮಿಂದಾಗುವ ಸಹಾಯವನ್ನು ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಡಿಡಿಎ ಪ್ರಧಾನ ಕಾರ್ಯದರ್ಶಿ ರಂಜಿತ್ ಪುದಿಯತಂಡ ಕಳೆದ ಸಾಲಿನ ಸಂಘದ ಸೇವಾ ಕಾರ್ಯಗಳನ್ನು ವಾಚಿಸಿದರು. ಕೊಡಗು ಜಿಲ್ಲಾ ಕಿವುಡರ ಸಂಘದ (ರಿ) ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ಕೆ.ಎಸ್.ಎಫ್.ಡಿ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಜಿ.ಎಸ್ ಮತ್ತು ಮತಗಟ್ಟೆ ಅಧಿಕಾರಿಯಾಗಿ ಕೆ.ಎಸ್.ಡಿ.ಡಬ್ಲ್ಯೂ.ಎ ಕಡೂರುವಿನ ಉಮಾ ಶಂಕರ್ ಅವರು ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿಯವರನ್ನು, ಗೌರವಾಧ್ಯಕ್ಷರನ್ನು ಮತ್ತು ಆಯೇಷಾರವರನ್ನು ಸನ್ಮಾನಿಸಲಾಯಿತು.
ಪದಾಧಿಕಾರಿಗಳು
ಕೊಡಗು ಜಿಲ್ಲಾ ಕಿವುಡರ ಸಂಘದ(ರಿ) ನೂತನ ಅಧ್ಯಕ್ಷರಾಗಿ ಮಾತಂಡ ಗೌರು ಸೋಮಣ್ಣ, ಉಪಾಧ್ಯಕ್ಷರಾಗಿ ಕೆ.ಕೆ ಶಂಕರನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಪುದಿಯತಂಡ, ಜಂಟಿ ಕಾರ್ಯದರ್ಶಿಯಾಗಿ ನಾಗೇಶ್, ಖಜಾಂಚಿಯಾಗಿ ಕೆ.ಎ ಸುರೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಅವಿನಾಶ್ ಜೋಸೆಫ್, ಸದಸ್ಯರುಗಳಾಗಿ ಬಿ.ಎ ಛಾಯಾದೇವಿ, ಬಿಂದಿಯಾ ಎಂ.ಜಿ, ಶಬರಿ ಕೆ.ಸಿ, ಮದನ್ ಎಂಕೆ, ವೆಂಕಟೇಶ್, ಕಿರಣ್ ಕೆಎಸ್, ಮೋಹನ್ ಚಂಗಪ್ಪ ಕೆ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.