ಸಿದ್ದಾಪುರ ಮೇ ೨೬ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಬೈರಂಬಾಡ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ೨ ಮರಿಯಾನೆ ಸೇರಿದಂತೆ ೬ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ತಿಳಿಸಿದರು. ಇದಲ್ಲದೆ ಕಣ್ಣಂಗಾಲ ಹಾಗೂ ಗುಹ್ಯ ಗ್ರಾಮದ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಕಾಡಾನೆಗಳ ಹಾವಳಿ ಇದ್ದು ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆ ಗಳ ಹಾವಳಿಯಿಂದ ತತ್ತರಿಸಿದ ಗುಹ್ಯ ಗ್ರಾಮದಲ್ಲಿ ಇದೀಗ ರಾತ್ರಿ ಸಮಯದಲ್ಲಿ ಕಾಡು ಎಮ್ಮೆಗಳು ಕಾಡುಕೋಣಗಳು ರಸ್ತೆಯಲ್ಲಿ ಸುತ್ತಾಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕರಡಿಗೋಡು ಗ್ರಾಮದಲ್ಲಿ ಕೂಡ ಕಾಡುಕೋಣ ಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿವೆ ಎಂದು ಬೆಳೆಗಾರರು ತಿಳಿಸಿದ್ದಾರೆ. ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ. ಮುಂದಿನ ವಾರದಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವಾಸು