ಮಡಿಕೇರಿ, ಮೇ ೨೭: ಕೊಡಗಿನ ದುಡಿಯುವ ವಸತಿರಹಿತ ಬಡ ಜನರಿಗೆ ನಿವೇಶನಕ್ಕಾಗಿ ಒತ್ತಾಯಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೊಡಗು ಜಿಲ್ಲಾ ಸಮಿತಿ ಮತ್ತು ನವ ಕರ್ನಾಟಕ ನಿರ್ಮಾಣ ಆಂದೋಲನ ವತಿಯಿಂದ ತಾ. ೨೯ ರಂದು ಮಡಿಕೇರಿ ಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಮೊಣ್ಣಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು. ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ವೀರಾಜಪೇಟೆ ಮಾಜಿ ಶಾಸಕ ಬಸವರಾಜು, ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ವಿವಿಧ ಪ್ರಮುಖ ನಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಎಸ್.ಸಿ., ಎಸ್.ಟಿ., ಅಲ್ಪಸಂಖ್ಯಾತ ಕೂಲಿ ಕಾರ್ಮಿಕ ವಸತಿ ರಹಿತರ ಅಂದಾಜು ೬೦ ಸಾವಿರದಷ್ಟು ಕುಟುಂಬಗಳಿವೆ. ಇವರಿಗೆ ನಿವೇಶನ ನೀಡಲು ಸರ್ಕಾರಿ ಕಂದಾಯ ಭೂಮಿಯನ್ನು ಗುರುತಿಸಬೇಕು.

ಭೂ ಕಬಳಿಕೆದಾರರಿಂದ ಒತ್ತುವರಿ ತೆರವುಗೊಳಿಸಿ ಜಿಲ್ಲೆಯ ಪ್ರತೀ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತ ಕುಟುಂಬಗಳಿಗೆ ತಲಾ ೫ ಸೆಂಟ್ ನಿವೇಶನ ನೀಡಬೇಕು. ಇದಕ್ಕಾಗಿ ಪಂಚಾಯಿತಿಗಳಲ್ಲಿ ೫೦ ಎಕರೆ ಜಾಗ ಕಾಯ್ದಿರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ಸಂದರ್ಭ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಎಐಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಟಿ. ಜಗದೀಶ್ ಕಿರಣ, ಎಂ. ಮಾದೇಶ, ಪ್ರಧಾನ ಕಾರ್ಯದರ್ಶಿ ಪಿ.ಎ. ಕುಸುಮಾವತಿ, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಹಾಗೂ ಸದಸ್ಯ ಸುದೀಪ್ ಉಪಸ್ಥಿತರಿದ್ದರು.