(ಸುಕುಮಾರ್)

ಐಗೂರು, ಮೇ.೨೭: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇರಿ ಪೈಸಾರಿಯ ಕಾಡಿನ ನಿಶಬ್ದದ ಮಧ್ಯೆ ಇಂದು ಕೇಳಿ ಬರುತ್ತಿರುವುದು ಬಾಂಬಿನ ಸದ್ದು ಅಲ್ಲ-ಬದುಕಿಗಾಗಿ ಹೋರಾಡುವ ಬಡಜನರ ಆಕ್ರಂದನ.

೨೦೦೮ರಲ್ಲಿ ಉಗ್ರಗಾಮಿ ತಡಿಯಂಡವಿಡ ನಜೀರ್‌ನ ಅಡಗುತಾಣವಾಗಿ ಸುದ್ದಿಯಾಗಿದ್ದ ಇದೇ ಜಾಗ ಇಂದು ನಿವೇಶನ ಹಕ್ಕಿಗಾಗಿ ಸಾವಿರಾರು ಜನರ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.

ಜಿಲ್ಲೆಯಲ್ಲಿ ಈ ಹಿಂದೆ ದಿಡ್ಡಳ್ಳಿ ಮತ್ತು ಪಾಲೆಮಾಡ್ ನಿವೇಶನ ರಹಿತರ ಹೋರಾಟದ ನಂತರ ಇದೀಗ ಲಕ್ಕೇರಿ ಪೈಸಾರಿಯಲ್ಲಿ ಅಹೋರಾತ್ರಿ ಹೋರಾಟ ಪ್ರಾರಂಭವಾಗಿದೆ.

ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ ೧೨೫/೧ ರ ಲಕ್ಕೇರಿ ಪೈಸಾರಿಯಲ್ಲಿ ದಿನಾಂಕ ತಾ.೨ ರಿಂದ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹೋರಾಟ ಆರಂಭಿಸಿರುವ ಮಾದಾಪುರ, ಹರದೂರು, ಸುಂಟಿಕೊಪ್ಪ ಮತ್ತು ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೬೧೦ ಕುಟುಂಬಗಳ ನೋವು, ಮನಸನ್ನು ಕರಗಿಸುವಂತಿದೆ. ಜಿಲ್ಲಾ ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಮೊಣ್ಣಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ಬಹುತೇಕರು ಕೂಲಿಕಾರ್ಮಿಕರಾಗಿದ್ದಾರೆ. ಅನೇಕರು ಇಂದಿಗೂ ಲೈನ್‌ಮನೆ ಹಾಗೂ ಬಾಡಿಗೆ ಮನೆಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.

ಕಾಡಿನ ಮಧ್ಯೆ ಎರಡು ಬೃಹತ್ ಪ್ಲಾಸ್ಟಿಕ್ ಟೆಂಟುಗಳನ್ನು ನಿರ್ಮಿಸಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಾಸದ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಸ್ನಾನಗ್ರಹ ನಿರ್ಮಿಸಿ ಇಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕುಡಿಯುವ ನೀರನ್ನು ಸುಂಟಿಕೊಪ್ಪದಿAದ ಬಾಡಿಗೆ ಹಣ ನೀಡಿ ಟ್ರಾಕ್ಟರ್‌ನಲ್ಲಿ ತರಲಾಗುತ್ತಿದೆ. ಅಡುಗೆ ಮತ್ತು ಆಹಾರದ ಸಮಸ್ಯೆಗೆ ಪ್ರತ್ಯೇಕ ಟೆಂಟ್ ನಿರ್ಮಿಸಿ ಗ್ಯಾಸ್ ಕೊರತೆಯಿಂದ ಹಣ ನೀಡಿ ಸೌದೆ ಖರೀದಿಸಿ ಅಡುಗೆ ಮಾಡುವ ದೃಶ್ಯಗಳು ಬಡತನದ ಕಹಿ ಸತ್ಯವನ್ನು ಹೇಳುತ್ತದೆ.

ಕ್ಯಾಂಪ್‌ನ ಪ್ರವೇಶ ದ್ವಾರದಲ್ಲಿ ಒಳ ಬರುವವರ ಹೆಸರನ್ನು ದಾಖಲಿಸುತ್ತಾರೆ. ಮದ್ಯಪಾನ ನಿಷೇಧ ಎಂಬ ನಾಮಫಲಕ ಆಳವಡಿಸಿ ಶಿಸ್ತು ಕಾಪಾಡುತ್ತಿರುವ ಹೋರಾಟಗಾರರ ಸಂಘಟನಾಶಕ್ತಿ ಮೆಚ್ಚುವಂತಿದೆ.

ರಾತ್ರಿ ವೇಳೆ ಅನಾರೋಗ್ಯ ಉಂಟಾದರೆ ರೋಗಿಗಳನ್ನು ಸಾಗಿಸಲು ಆಟೋರಿಕ್ಷ ವ್ಯವಸ್ಥೆಯನ್ನು ಹೋರಾಟಗಾರರೇ ಮಾಡಿದ್ದಾರೆ. ಕ್ಯಾಂಪಿನ ಭದ್ರತೆಗಾಗಿ ರಾತ್ರಿ ಗಸ್ತು ಪಡೆ, ಯಾರೂ ಕಾಣೆಯಾಗದಂತೆ ಪ್ರತಿದಿನ ಹಾಜರಾತಿ ಪರಿಶೀಲನೆಯ ಜೊತೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಿಂದ ಬೀಟ್ ವ್ಯವಸ್ಥೆ ಮಾಡಲಾಗಿದೆ.

ಕ್ಯಾಂಪಿನೊಳಗೆ ಯಾರು ಸುಮ್ಮನೆ ಕುಳಿತುಕೊಳ್ಳದೆ, ನೀರು, ಅಡುಗೆ ಮತ್ತು ಆಹಾರದ ಸರಬರಾಜಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ನಿವೇಶನ ರಹಿತ ಧರಣಿ ನಿರತರಾದ ಶರತ್, ಮಂಜುಳಾ, ಚೈತ್ರ, ಲಿಂಗಮ್ಮ ಮತ್ತು ನೇತ್ರ ಅವರು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು. ಸರ್ಕಾರ ಹೋರಾಟಗಾರರೊಂದಿಗೆ ಚರ್ಚೆಗೆ ಮುಂದಾಗಬೇಕಾಗಿದ್ದು ನಮ್ಮನ್ನು ಕೇವಲ ಸಂಖ್ಯೆಗಳಾಗಿ ನೋಡದೆ ಬದುಕುಳ್ಳ ಮನುಷ್ಯರಂತೆ ನೋಡಬೇಕು ಎಂಬ ಮಾತು ಸ್ಥಳಕ್ಕೆ ತೆರಳಿದ್ದ ‘ಶಕ್ತಿ‘ಗೆ ಕೇಳಿ ಬಂತು.

ತಾಲೂಕಿನ ತಹಶೀಲ್ದಾರರಾದ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಕುಮಾರ್, ಪಿಡಿಒ ರವಿ ನಾಯರ್ ಮತ್ತು ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಲೀಂ ಹೊಸತೋಟ ಸ್ಥಳಕ್ಕೆ ಭೇಟಿ ನೀಡಿದ್ದರು.