ವೀರಾಜಪೇಟೆ, ಮೇ ೨೭: ವೀರಾಜಪೇಟೆಯ ಐಮಂಗಲ ಗ್ರಾಮದ ಶ್ರೀ ಭದ್ರಕಾಳಿ ಸೇವಾ ಸಮಿತಿ ವತಿಯಿಂದ ಎರಡು ವರ್ಷಗಳಿಗೊಮ್ಮೆ ನಡೆಯುವ ಐಮಂಗಲ ಗ್ರಾಮದ ಶ್ರೀ ಭದ್ರಕಾಳಿ ದೇವರ ಬೋಡ್ ನಮ್ಮೆ ಶ್ರದ್ದಾಭಕ್ತಿಯಿಂದ ನಡೆಯಿತು.

ಬೋಡ್ ನಮ್ಮೆಯ ಪ್ರಯುಕ್ತ ಐಮಂಗಲ, ಮಗ್ಗುಲ, ವೈಪಡ ಮೂರು ಗ್ರಾಮದವರು ಸೇರಿ ಭದ್ರಕಾಳಿ ದೇವರ ಹಬ್ಬಕ್ಕೆ ಕಟ್ಟು ಹಾಕಿದರು. ಮರುದಿನ ಊರಿನ ಮಂದ್‌ನಲ್ಲಿ ಸೇರಿ ಪೀಲಿ ಆಟ್, ತಾಲಿ ಪಾಟ್ ನಡೆಯಿತು.. ಬಳಿಕ ಕಳಿ ಹೊರಟು ಮನೆ ಮನೆಗೆ ಹೋಗಲಾಯಿತು. ಬಳಿಕ ಎರಡು ದಿನಗಳ ಕಾಲ ಭದ್ರಕಾಳಿ ದೇವಸ್ಥಾನದಲ್ಲಿ ಕಳಿ ಮರಿಯುವೋ, ಪೂಜೆ, ಕುದುರೆ ಕಟ್ಟುವುದು ಮತ್ತು ಕುದುರೆ ಆಟ್, ಮಾಚೆಟ್ಟಿ ಪರೆಲ್ ಕುದುರೆ ಆಟ್, ನಡೆದು ಐಮಂಗಲ ಭದ್ರಕಾಳಿ ದೇವಸ್ಥಾನಕ್ಕೆ ಕುದುರೆ ಹತ್ತುವುದು, ತೆರೆ, ತೆರೆ ಮೇಲೇರಿ ಬೀಳುವುದು, ಬಳಿಕ ತೆರೆ ದೇವಸ್ಥಾನ ಹತ್ತುವ ಆಚರಣೆ ನಡೆಯಿತು.

ಕುಂದ, ಚೂಳೆ ಹೊರಟು ಬಳಿಕ ದೇವಸ್ಥಾನಕ್ಕೆ ತೆರಳಿದ ನಂತರ ಕಳ ಮಡಕುವೋ ಆಚರಣೆ ಮುಖಾಂತರ ವಾರ್ಷಿಕ ಬೋಡ್‌ನಮ್ಮೆಗೆ ತೆರೆ ಎಳೆಯಲಾಯಿತು. ಈ ಸಂದರ್ಭ ಐಮಂಗಲ, ಮಗ್ಗುಲ, ವೈಪಡ ಗ್ರಾಮದ ಗ್ರಾಮಸ್ಥರು, ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯವರು, ಹಾಗೂ ಭದ್ರಕಾಳಿ ಸೇವಾ ಸಮಿತಿಯವರು ಉಪಸ್ಥಿತರಿದ್ದರು.