ಚೆಯ್ಯಂಡಾಣೆ, ಮೇ ೨೮: ಸರ್ವರ್ ಸಮಸ್ಯೆಯಿಂದ ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯಲು, ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ದಿನಗಟ್ಟಲೆ ಕಾಯುತ್ತಿರುವ ದೃಶ್ಯ ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿದೆೆ.

ವಾರದ ಹಿಂದೆ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳು, ಆಹಾರ ನಾಗರಿಕ ಇಲಾಖೆಯಿಂದ ಸರಬರಾಜು ಮಾಡಿವೆÉ.

ಆದರೆ ಕಳೆದ ಒಂದು ವಾರದಿಂದ ಸರ್ವರ್ ಸಮಸ್ಯೆ ಉಂಟಾಗಿದ್ದು, ಜನರು ನಿತ್ಯದ ಕೆಲಸಗಳನ್ನು ಬಿಟ್ಟು, ತಿಂಡಿ, ಊಟಕ್ಕೂ ಹೋಗದೇ, ತಮ್ಮ ಸರತಿಗಾಗಿ ಪಡಿತರ ವಿತರಣಾ ಕೇಂದ್ರಗಳ ಮುಂದೆ ಕೂತಿದ್ದಾರೆ.

ಹಳ್ಳಿಗಳಲ್ಲಿ ಮೊದಲೇ ನೆಟ್‌ವರ್ಕ್ ಸಿಗುವುದಿಲ್ಲ. ಸರ್ವರ್ ಸಮಸ್ಯೆಯಿಂದ ಬಹತೇಕ ಗ್ರಾಮೀಣ ಭಾಗದಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಶೇ.೨೦ ರಷ್ಟು ಕಾರ್ಡ್ದಾರರಿಗೆ ಮಾತ್ರ ಪಡಿತರ ವಿತರಣೆ ಮಾಡಲಾಗಿದೆÉ. ಸರ್ವರ್ ಸಮಸ್ಯೆ ಮುಂದುವರಿದರೆ ಉಳಿದವರಿಗೆ ಇನ್ನೂ ೩ ದಿನಗಳÀಲ್ಲಿ ವಿತರಣೆ ಮಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ ವಿತರಕರು.

ಆಹಾರ ಇಲಾಖೆಯ ನಿಯಮದಂತೆ ಪಡಿತರ ಪಡೆಯಲು ತಿಂಗಳೊಳಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ನೀಡಬೇಕು. ಬೆರಳು ಗುರುತು ನೀಡಲು ಆಗದವರಿಗೆ ಈ ತಿಂಗಳ ಅಕ್ಕಿ ಸಿಗುವುದಿಲ್ಲ. ಸರ್ಕಾರದ ಪಡಿತರವನ್ನು ನಂಬಿರುವ ಬಡ ಕುಟುಂಬದವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಪಡಿತರಕ್ಕಾಗಿ ಒಂದು ತಿಂಗಳು ಕಾಯಬೇಕಿದೆ’ ಎನ್ನುತ್ತಿದ್ದಾರೆ ಇಲ್ಲಿಯ ಜನರು.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಸಾವಿರಕ್ಕೂ ಅಧಿಕ ಕಾರ್ಡ್ಗಳಿವೆ. ಇಲಾಖೆಯ ನಿಯಮ ಪ್ರಕಾರ ಬೆಳಿಗ್ಗೆ ೬ ರಿಂದ ೧೦ ರವರೆಗೆ ವಿತರಣೆಗೆ ಅವಕಾಶವಿದ್ದರೂ ಕೂಡ ಸರ್ವರ್ ಮಾತ್ರ ಸರಿ ಇರಲ್ಲ ಎಂದು ಪಡಿತರದಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೆಯ್ಯಂಡಾಣೆ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಿಗ್ಗೆ ೬ ರಿಂದ ೧೦ ಗಂಟೆವರೆಗೆ ಮತ್ತು ಸಂಜೆ ೫ ರಿಂದ ೮ ಗಂಟೆವರೆಗೆ ಜನರಿಂದ ಬಯೋಮೆಟ್ರಿಕ್ ಪಡೆದು, ಉಳಿದ ಸಮಯದಲ್ಲಿ ಪಡಿತರ ವಿತರಣೆ ಮಾಡುತ್ತಿದ್ದಾರೆ. ಸರ್ವರ್ ಸಮಸ್ಯೆ ಇಲ್ಲದಾಗ, ವಿತರಕರೇ ಮೊಬೈಲ್ ಕರೆ ಮಾಡಿ, ಜನರನ್ನು ಕರೆದು ಬಯೋಮೆಟ್ರಿಕ್ ಪಡೆಯುತ್ತಿದ್ದಾರೆ.

ಕಡಂಗ ನ್ಯಾಯಬೆಲೆ ಅಂಗಡಿಯಲ್ಲಿ ಕೂಡ ಇದೆ ಸಮಸ್ಯೆ ತಲೆದೋರಿದ್ದು ಇಲ್ಲಿಯೂ ಕೂಡ ಬೆಳಿಗ್ಗೆ ೬ ರಿಂದ ೧೦ ಗಂಟೆಯ ವರೆಗೆ ಹಾಗೂ ಸಂಜೆ ೬ ರಿಂದ ವಿತರಣೆ ಮಾಡಲಾಗುತ್ತಿದೆ, ಆದರೆ ಎಲ್ಲದಕ್ಕೂ ಸರ್ವರ್ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.

ಕಾಡಾನೆ ಭಯ

ಈ ವ್ಯಾಪ್ತಿಯ ಚೇಲಾವರ, ಕರಡ, ನರಿಯಂದಡ, ಎಡಪಾಲ ಗ್ರಾಮಗಳಲ್ಲಿ ನಿರಂತರ ಕಾಡಾನೆ ಹಾವಳಿ ಇದ್ದು ಪಡಿತರ ಪಡೆಯಲು ಮುಂಜಾನೆ ಹಾಗೂ ಸಂಜೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಅನಿವಾರ್ಯತೆ ಇದೆ. ಭಯದಲ್ಲಿಯೇ ನ್ಯಾಯಬೆಲೆ ಅಂಗಡಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭಯದಿಂದ ನ್ಯಾಯಬೆಲೆ ಅಂಗಡಿಗೆ ತೆರಳಿದರು ಪಡಿತರ ಮಾತ್ರ ದೊರೆಯುತ್ತಿಲ್ಲ, ರಾತ್ರಿ ವೇಳೆ ಪಡಿತರ ಪಡೆಯಲು ಸರತಿ ಸಾಲಿನಲ್ಲಿದ್ದಾಗ “ಇಲ್ಲಿ ಆನೆ ಇದೆ ಬರುವಾಗ ಎಚ್ಚರ” ಎಂದು ಕರೆ ಬರುವುದು ಸಾಮಾನ್ಯ. ಇದು ಇಲ್ಲಿನ ಜನರ ಪಾಡಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಇದಕ್ಕೆಲ್ಲ ಕಾರಣ ಸರ್ವರ್ ಸಮಸ್ಯೆಯಾಗಿದೆ.

ಸಂಬAಧಪಟ್ಟ ಆಹಾರ ಇಲಾಖೆ, ಜನಪ್ರತಿನಿಧಿಗಳು, ಶಾಸಕರು ಸಂಸದರುಗಳು ಇದಕ್ಕೊಂದು ಪರಿಹಾರ ಕಂಡುಕೊಟ್ಟು ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

- ಅಶ್ರಫ್