ಸುಂಟಿಕೊಪ್ಪ, ಮೇ ೩೧: ಒತ್ತಡಗಳಿಂದ ಹೊರಬರುವ ಭಾವ ಅಕ್ಷರ ರೂಪ ತಾಳಿದಾಗ ನಾವು ನಿರಾಳವಾಗುತ್ತೇವೆ. ಆದರೆ ಕೃತಕ ಬುದ್ದಿಮತ್ತೆ ಮತ್ತು ಮೊಬೈಲ್ ಇರುವ ಕಾಲದಲ್ಲಿ ಕವಿತೆಗಳು ಯಾಕೆ ಬೇಕು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ಜೀವವಿಲ್ಲದ ಭಾವವಿಲ್ಲದ ಕೃತಕ ಬುದ್ಧಿಮತ್ತೆ ನಮಗೆ ಮಾಹಿತಿಗಳನ್ನು ಕೊಡಬಹುದೆ ಹೊರತು ಮನುಷ್ಯನ ಮನಸ್ಸಿನಾಳದ ಸ್ಪಂದನಗಳಿಗೆ ಪ್ರತಿಸ್ಪಂದಿಸುವ ಸಾಧ್ಯತೆ ಇಲ್ಲ ಎಂದು ಸಾಹಿತಿ ಕೃಪಾ ದೇವರಾಜ್ ಹೇಳಿದರು.

ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕವಿತೆ ಎಂಬುದು ನಮ್ಮೊಳಗಿರುವ ಒಂದು ಅಮೂರ್ತ ಭಾವ. ನಮ್ಮ ಮನದ ಸಂತೋಷ ದುಃಖ, ಹತಾಶೆ ನಮ್ಮವರಿಂದ ನಮಗಾಗುವ ಸೋಲು-ಗೆಲುವು ಹೀಗೆ ನವರಸಗಳ ಪೈಕಿ ಒಳಗೆ ಇರಲಾರೆ ಹೊರಗೆ ಬಿಡಲಾರೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮೊಳಗೆ ಹುಟ್ಟುವ ಭಾವವೇ ಕವಿತೆ ಎಂದು ವಿಶ್ಲೇಶಿಸಿದರು. ಕವಿಗೋಷ್ಠಿಗೆ ಮೊದಲು ಆಶಯ ನುಡಿಗಳಾನ್ನಾಡಿದ ಶನಿವಾರಸಂತೆಯ ಸಾಹಿತಿ ಲಾವಣ್ಯ ಮೋಹನ್, ಕವಿತೆ ಎಂದರೆ ಕೇವಲ ಪದಪುಂಜಗಳಲ್ಲ ಅದು ಮನುಷ್ಯನ ಹೃದಯದ ಆಳದ ತುಡಿತ. ಅದು ಭಾವನೆಗಳ ಅಭಿವ್ಯಕ್ತಿಯಾಗಿದ್ದು, ಅನುಭವಗಳ ಸಾರ ಮತ್ತು ಜೀವನದ ದರ್ಶನ. ಸಮಾಜದ ಏಳುಬೀಳುಗಳಿಗೆ ಕಾವ್ಯ ಒಂದು ದರ್ಪಣವಿದ್ದಂತೆ. ಕವಿತೆಯ ಸಾಲುಗಳು ನಮ್ಮ ಮನಸ್ಸಿಗೆ ಮುದನೀಡಿ ಅಲೋಚನೆಯನ್ನು ಬದಲಾಯಿಸುವ ಬದುಕುವ ದಾರಿಯನ್ನು ತೋರಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.

ಮನುಷ್ಯನಿಗೆ ಏಕಾಂತದಲ್ಲಿ, ನೋವಿನಲ್ಲೇ ಆಗಲಿ ಅಥವಾ ಸಂತೋಷದಲ್ಲೇ ಆಗಲಿ ಅತ್ಯುತ್ತಮ ಒಡನಾಡಿ ಎಂದರೆ ಕವಿತೆ. ಕವಿತೆಯು ಶಾಂತಿ ಮತ್ತು ಸಾಂತ್ವನವನ್ನು ನೀಡುವ ಜೊತೆಗೆ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮತ್ತು ಬದಲಾವಣೆಗೆ ಪ್ರೇರೆಪಿಸುವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಶಕ್ತಿಯನ್ನು ಹೊಂದಿದೆ ಎಂದರು.

ಕವಿಗೋಷ್ಠಿಯಲ್ಲಿ ಇ. ಸುಲೈಮಾನ್, ಹೇಮಂತ್ ಪಾರೇರ, ವಹೀದ್ ಜಾನ್, ಪಿ.ಎಫ್. ಸಬಾಸ್ಟಿನ್, ದಿಲೀಶ್ ನಾಯರ್, ಬಿ.ಎಸ್. ಸತೀಶ್, ರಂಜಿತ್ ಕವಲಪಾರ, ವಿಜಯಲಕ್ಷಿö್ಮ ಮಂಜುನಾಥ್, ಎಂ.ಬಿ.ಜಯಲಕ್ಷಿö್ಮ, ರಾಧಿಕ ವಿಶ್ವನಾಥ್, ಗೀತಾಂಜಲಿ ಮಹೇಶ್, ಕೆ.ಭಾಗೀರಥಿ, ಸುನಿತಾ ವಿಶ್ವನಾಥ್ ತಮ್ಮ ಕವನಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಸಾಪದ ಸಂಘಟನಾ ಕಾರ್ಯದರ್ಶಿ ಬಿ.ಎಂ.ವಾಸು ರೈ, ಸಹಕಾರ್ಯದರ್ಶಿ ಜಲಜಾ ಶೇಖರ್, ಎ.ವಿ. ಮಂಜುನಾಥ್ ಮತ್ತು ಉಪನ್ಯಾಸಕರಾದ ತೀಲೋಥಮೆ ಮಂಜುನಾಥ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸೌಭಾಗ್ಯ ಸ್ವಾಗತಿಸಿ, ನಿರೂಪಿಸಿ, ಎಂ.ಪಿ.ಲಿಯೋನ ವಂದಿಸಿದರು.