ಪೊನ್ನಂಪೇಟೆ, ಮೇ ೩೧: ನಾಯಿಗಳು ಬೊಗಳಿದ್ದಕ್ಕೆ ಕೆರಳಿದ ಕಾಡಾನೆ ನಾಯಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಮನೆಯ ಗೇಟ್ ಅನ್ನು ತಳ್ಳಿ ಮನೆ ಅಂಗಳಕ್ಕೆ ನುಗ್ಗಿದ ಘಟನೆ ಪೊನ್ನಂಪೇಟೆ ತಾಲೂಕಿನ ಅರ್ವತ್ತೊಕ್ಕಲು ಗ್ರಾಮದಲ್ಲಿ ನಡೆದಿದೆ. ತಾ. ೩೧ ರಂದು ಮುಂಜಾನೆ ೬ ಗಂಟೆ ಸಮಯದಲ್ಲಿ ಅರುವತ್ತೊಕ್ಕಲು ಗ್ರಾಮದ ಕಾಫಿ ಬೋರ್ಡ್ ಸಮೀಪದ ಕಬ್ಬಚ್ಚಿರ ಬಿದ್ದು ಉತ್ತಪ್ಪ ಅವರ ಮನೆಯ ಬಳಿ ಸಂಚರಿಸುತ್ತಿದ್ದ ಕಾಡಾನೆ, ನಾಯಿ ಬೊಗಳಿದಾಗ ಅದನ್ನು ಹಿಂಬಾಲಿಸಿಕೊAಡು ಓಡಿದೆ.
ಈ ಸಂದರ್ಭ ನಾಯಿಗಳು ಮನೆಯ ಕಾಂಪೌAಡ್ ಹಾರಿ ಮನೆ ಅಂಗಳಕ್ಕೆ ತೆರಳಿದಾಗ ಹಿಂದೆಯೇ ಬಂದು ಗೇಟ್ ತಳ್ಳಿಕೊಂಡು, ಒಳಗೆ ನುಗ್ಗಿದ ಆನೆ ತನ್ನನ್ನು ನೋಡಿ ಬೊಗಳುತ್ತಿದ್ದ ನಾಯಿಗಳನ್ನು ಬೆನ್ನಟ್ಟಿದೆ. ನಾಯಿಗಳು ಇದರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿವೆ. ನಂತರ ಆನೆ ತೋಟದ ಕಡೆಗೆ ತೆರಳಿ ಮರೆಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಈ ಕುರಿತು ಮನೆಯ ಮಾಲೀಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.