ಚೆಟ್ಟಳ್ಳಿ, ಮೇ ೩೧: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಜೂನ್ ೫ ರಂದು ನಡೆಯಲಿರುವ ವಿವಿಧ ಹಣ್ಣುಗಳ ಮೇಳಕ್ಕೆ ಸಿದ್ಧತೆ ನಡೆಯುತ್ತಿವೆ ಎಂದು ಕೇಂದ್ರದ ಮುಖ್ಯಸ್ಥ ಬಿ.ಎಂ. ಮುರಳೀದರ್ ತಿಳಿಸಿದ್ದಾರೆ.
ಮೇಳದಲ್ಲಿ ೧೦೦ಕ್ಕೂ ಹೆಚ್ಚು ತಳಿಗಳ ಮಾವು, ೫೦ಕ್ಕೂ ಹೆಚ್ಚು ತಳಿಗಳ ಹಲಸು ಹಾಗೂ ಅವಕಾಡೋ (ಬೆಣ್ಣೆ ಹಣ್ಣು) ಸೇರಿದಂತೆ ಹಲವು ಅಪರೂಪದ ಕಾಡುಹಣ್ಣುಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ವಿವಿಧ ಹಣ್ಣಿನ ಗಿಡಗಳ ಮಾರಾಟ, ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ರೈತರು ಬೆಳೆದ ವಿಶೇಷ ಹಣ್ಣುಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.
ಹಣ್ಣುಗಳ ಪ್ರದರ್ಶನಕ್ಕೆ ಬಹುಮಾನ
ಉತ್ತಮ ಹಣ್ಣು ಪ್ರದರ್ಶಿಸಿದ ರೈತರಿಗೆ ಮೊದಲ, ಎರಡನೇ ಹಾಗೂ ಮೂರನೇ ಬಹುಮಾನವಾಗಿ ಕ್ರಮವಾಗಿ ರೂ. ೩೦೦೦, ರೂ. ೨೦೦೦ ಹಾಗೂ ರೂ. ೧೦೦೦ ನೀಡಲಾಗುತ್ತದೆ. ಹಣ್ಣು ಬೆಳೆ ಅಭಿವೃದ್ಧಿಯಲ್ಲಿ ಸಾಧನೆ ಮಾಡಿದ ಕೃಷಿಕರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು. ರೈತರಿಗೆ ಮಾಹಿತಿ ವಿನಿಮಯದ ವೇದಿಕೆಯಾಗಿ ಹಾಗೂ ಸಾರ್ವಜನಿಕರಿಗೆ ಹಣ್ಣುಗಳ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ವಿಜ್ಞಾನಿಗಳು, ಕೊಡಗಿನ ಕೃಷಿಕರಲ್ಲದೆ, ವಿವಿಧ ರಾಜ್ಯಗಳ ಕೃಷಿಕರು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಶಾಲಾ - ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
- ಕರುಣ್ ಕಾಳಯ್ಯ