ಕುಶಾಲನಗರ, ಜೂ. ೧ : ಕುಶಾಲನಗರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಜನ ಸಾಮಾನ್ಯರ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ಕುಶಾಲನಗರ ತಾಲೂಕು ಕಚೇರಿ ಮೂಲಕ ಸ್ಪಂದಿಸಿ ಅಗತ್ಯ ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರ ಕೆಲಸ ನಿರ್ವಹಿಸಲಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಕಿರಣ್ ಜಿ ಗೌರಯ್ಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರ ಕಾರ್ಯನಿರತ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಲವು ಸಮಸ್ಯೆಗಳನ್ನು ಹೊಂದಿರುವ ಕುಶಾಲನಗರ ಈ ಹಿಂದೆ ಸೋಮವಾರಪೇಟೆ ತಾಲೂಕು ಕೇಂದ್ರದ ಆಡಳಿತಕ್ಕೆ ಒಳಪಟ್ಟು ಜನಸಾಮಾನ್ಯರು ತಮ್ಮ ನಿತ್ಯ ಅಗತ್ಯಗಳಿಗೆ ದೂರದ ಸೋಮವಾರಪೇಟೆ ಕೇಂದ್ರಕ್ಕೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಕುಶಾಲನಗರ ನೂತನ ತಾಲೂಕು ರಚನೆ ಬೆನ್ನಲ್ಲೇ ತಾಲೂಕಿನ ಜನತೆ ಹಲವು ಸಮಸ್ಯೆಗಳನ್ನು ಹೊತ್ತು ನಿತ್ಯ ತಾಲೂಕು ಕಚೇರಿಗೆ ಬರುತ್ತಿದ್ದು ಅವುಗಳಿಗೆ ತಾಲೂಕು ಕಚೇರಿಯ ಸರ್ವ ಸಿಬ್ಬಂದಿಗಳು ಸೂಕ್ತ ಸ್ಪಂದನೆ ನೀಡಿರುವುದಾಗಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಕುಶಾಲನಗರ ಪಟ್ಟಣದ ಬಹುತೇಕ ನದಿ ತಟದ ಬಡಾವಣೆಗಳ ಪ್ರವಾಹ ಪರಿಸ್ಥಿತಿ ಸೇರಿದಂತೆ ತಾಲೂಕಿನ ಗಡಿ ಭಾಗದ ನೆಲ್ಲಿಹುದಿಕೇರಿ, ಬೆಟ್ಟದ ಕಾಡು, ಕಣಿವೆ ವ್ಯಾಪ್ತಿಯಲ್ಲಿ ಆ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ತರಿಗೆ ಅಗತ್ಯವಾದ ಕಾಳಜಿ ಕೇಂದ್ರಗಳನ್ನು ತೆರೆಯುವುದು ಜನರಿಗೆ ಮುನ್ನೆಚ್ಚರಿಕೆ ನೀಡುವ ಮೂಲಕ ಯಾವುದೇ ರೀತಿಯ ಅನಾಹುತ ಉಂಟಾಗದAತೆ ಎಚ್ಚರವಹಿಸುವಲ್ಲಿ ಕಂದಾಯ ಇಲಾಖೆ ಕಾರ್ಯ ನಿರ್ವಹಿಸಿದೆ.

ಈ ಮೂಲಕ ಪ್ರವಾಹ ಸಂದರ್ಭ ಯಾವುದೇ ರೀತಿಯ ಸಾವು ನೋವು ಉಂಟಾಗದAತೆ ಮುನ್ನೆಚ್ಚರಿಕೆ ವಹಿಸುವಲ್ಲಿ ಯಶಸ್ಸು ಕಂಡಿದ್ದೇವೆ ಹಾಗೂ ಮಳೆ ಹಾನಿಗೆ ಒಳಗಾಗಿ ಮನೆ ಕಳೆದುಕೊಂಡವರ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವ ಮೂಲಕ ಕೇವಲ ೪೮ ಗಂಟೆಗಳಲ್ಲಿ ತಾತ್ಕಾಲಿಕ ಪರಿಹಾರ ಒದಗಿಸುವಲ್ಲಿ ಕೂಡ ಯಶಸ್ವಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

ಹಾರಂಗಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಂದರ್ಭ ಉಂಟಾಗುತ್ತಿದ್ದ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವಲ್ಲಿ ಕ್ಷೇತ್ರ ಶಾಸಕರ ಸಲಹೆಯಂತೆ ಹಾರಂಗಿ ಅಣೆಕಟ್ಟು ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ದೊಂದಿಗೆ ಕೆಳಭಾಗದ ಜನರು ಯಾವುದೇ ರೀತಿಯ ಅನಾಹುತಗಳಿಗೆ ಒಳಗಾಗದಂತೆ ಜಲಾಶಯದಿಂದ ಹಂತ ಹಂತವಾಗಿ ನೀರು ಬಿಡುವಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿತ್ತು ಎಂದು ತಾಲೂಕು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಹೇಳಿದರು.

ತುರ್ತು ಸಂದರ್ಭದಲ್ಲಿ ಕಚೇರಿಯ ಅಗತ್ಯ ಸಿಬ್ಬಂದಿಗಳ ಮೊಬೈಲ್ ಗಳು ನಿರಂತರವಾಗಿ ಚಾಲನೆಯಲ್ಲಿರುವಂತೆ ಸೂಚನೆ ನೀಡುವ ಮೂಲಕ ಜನರಿಗೆ ಕಷ್ಟ ಕಾಲದಲ್ಲಿ ಸಂಪರ್ಕ ಲಭಿಸುವಂತೆ ಕೂಡ ಮಾಡಿ ಸಮಸ್ಯೆಗೆ ಸ್ಪಂದನೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು ಎಂದು ಅವರು ತಮ್ಮ ಕೆಲಸದ ದಿನಗಳನ್ನು ಸ್ಮರಿಸಿದರು.

ಕುಶಾಲನಗರದ ಸುತ್ತಮುತ್ತ ವ್ಯಾಪ್ತಿಯ ಗ್ರಾಮಗಳಲ್ಲಿ ೯೪ ಸಿ ಅಡಿಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು ೫೧೭ ಹಕ್ಕು ಪತ್ರ ವಿತರಣೆ ಮಾಡಿರೋದು ತಮ್ಮ ಅವಧಿಯ ಸಾಧನೆ ಎನ್ನುತ್ತಾರೆ.

ವಿಶೇಷವೆಂದರೆ ಕುಶಾಲನಗರ ಪಟ್ಟಣದ ಬೈಚನಹಳ್ಳಿ ಸೇರಿದಂತೆ ಸುಮಾರು ಕಡೆ ಸ್ಮಶಾನ ಜಾಗಗಳು ಅತಿಕ್ರಮಣವಾಗಿ ಆ ಭಾಗದ ನಿವಾಸಿಗಳು ಅಂತ್ಯಕ್ರಿಯೆ ಸಂದರ್ಭ ಎದುರಿಸುತ್ತಿದ್ದ ಸಮಸ್ಯೆಯನ್ನು ಸ್ಥಳಕ್ಕೆ ತೆರಳಿ ಜನರೊಂದಿಗೆ ಚರ್ಚಿಸಿ ಸಾರ್ವಜನಿಕ ಸ್ಮಶಾನಕ್ಕೆ ಅಗತ್ಯವಿರುವ ಜಾಗವನ್ನು ಒದಗಿಸಿ ಕೊಟ್ಟಿರುವುದು ಕೂಡ ಕಿರಣ್ ಜಿ ಗೌರಯ್ಯ ತನ್ನ ಸೇವಾ ಅವಧಿಯಲ್ಲಿ ಮನಸ್ಸಿಗೆ ತೃಪ್ತಿ ತಂದಿದೆ ಎನ್ನುತ್ತಾರೆ.

ಗುಡ್ಡೆಹೊಸೂರು, ನೆಲ್ಲಿಹುದಿಕೇರಿ ಸೇರಿದಂತೆ ವಿವಿಧೆಡೆ ಎಂಟು ಜಾಗದಲ್ಲಿ ಜನರ ಬಹು ದಿನಗಳ ಸ್ಮಶಾನ ಜಾಗದ ಬೇಡಿಕೆಗೆ ಸ್ಪಂದಿಸಿ ಅಗತ್ಯ ಜಾಗ ನೀಡಿರುವುದು.

ಮನೆ ನಿವೇಶನಗಳ ಸಮಸ್ಯೆಗೂ ಪರಿಹಾರ ಒದಗಿಸಲಾಗಿದ್ದು ಕುಶಾಲನಗರ ಪೌರಕಾರ್ಮಿಕರ ಮನೆ ನಿವೇಶನ ಸೌಲಭ್ಯ ಸೇರಿದಂತೆ ಹಲವಾರು ಕುಟುಂಬ ಸದಸ್ಯರಿಗೆ ಪ್ರತ್ಯೇಕ ಮನೆ ನಿವೇಶನ ಸೌಲಭ್ಯ ಅರ್ಜಿಗಳ ವಿಲೇವಾರಿ ನಡೆದು ಕ್ಷೇತ್ರ ಶಾಸಕರು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಿರೋದಾಗಿ ಮಾಹಿತಿ ಒದಗಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಅಗತ್ಯವಾಗಿದ್ದ ಒಂದು ಎಕರೆ ಜಾಗವನ್ನು ಹುಲಸೆ ಗ್ರಾಮ ವ್ಯಾಪ್ತಿಯಲ್ಲಿ ಮೀಸಲಿಡಲು ಕೂಡ ಕ್ರಮ ಕೈಗೊಳ್ಳಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿರುವ ಪ್ರದೇಶಗಳಲ್ಲಿ ಅವುಗಳನ್ನು ತೆರವುಗೊಳಿಸುವ ಕಾರ್ಯಚರಣೆ ನಿರಂತರವಾಗಿ ನಡೆದಿದೆ.

ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ದರ್ಖಾಸ್ ಗ್ರಾಂಟ್ ಕಡತಗಳನ್ನು ದುರಸ್ತಿಗೊಳಿಸಲಾಗಿದ್ದು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು ೭೫೦ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು ಸುಮಾರು ೬೦೦ ಅರ್ಜಿಗಳು ದುರಸ್ತಿಗೆ ಬಾಕಿ ಇರುವುದಾಗಿ ಮಾಹಿತಿ ನೀಡಿದರು.

ತಾಲೂಕಿನ ವ್ಯಾಪ್ತಿಯ ಎಂಟಕ್ಕೂ ಸರಕಾರಿ ಶಾಲಾ ಕಟ್ಟಡಗಳ ಆರ್ ಟಿ ಸಿ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ ಜೊತೆಗೆ ೧೮ ಅಂಗನವಾಡಿ ಕಟ್ಟಡಗಳಿಗೆ ಕೂಡ ಎಲ್ಲಾ ರೀತಿಯ ದಾಖಲೆಗಳನ್ನು ಸರಿಪಡಿಸಲಾಗಿದ್ದು ಯಾವುದೇ ತಕರಾರು ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಾವೇರಿ ನದಿ ಬಫರ್ ಜೋನ್ ಪ್ರದೇಶಗಳ ಸರ್ವೆ ಕಾರ್ಯ ಈಗಾಗಲೇ ನಡೆದಿದ್ದು ಕೆಲವೆಡೆ ಒತ್ತುವರಿ ತೆರವುಗೊಳಿಸಲಾಗಿದೆ. ಕೂಡಿಗೆಯಿಂದ ಗುಡ್ಡೆ ಹೊಸೂರು ತನಕ ಅಳತೆ ಕಾರ್ಯ ಮುಗಿದಿದೆ ಮತ್ತು ಕ್ರಿಯಾ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ನದಿ ಮಧ್ಯ ಭಾಗದಿಂದ ೫೦ ಮೀಟರ್ ವ್ಯಾಪ್ತಿ ಬಫರ್ ಜೋನ್ ವ್ಯಾಪ್ತಿಗೆ ಸೇರಿದ್ದು ಆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯ ಮುಂದೆ ನಡೆಯಲಿದೆ ಎಂದು ತಿಳಿಸಿದರು.

ಪಟ್ಟಣ ವ್ಯಾಪ್ತಿಯ ತಾವರೆಕೆರೆ ಅಭಿವೃದ್ಧಿ ಮಾಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿರಣ್ ಜಿ ಗೌರಯ್ಯ ಈಗಾಗಲೇ ಕ್ರಿಯಾ ಯೋಜನೆ, ತಯಾರಾಗಿದ್ದು ಕುಶಾಲನಗರ ಯೋಜನಾ ಪ್ರಾಧಿಕಾರ ಮೂಲಕ ಅಂದಾಜು ೩ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ.

ಕುಶಾಲನಗರ ಮಡಿಕೇರಿ ರಸ್ತೆಯ ಮಾದಾಪಟ್ಟಣ ಬಳಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ತಾಲೂಕು ಕಚೇರಿ ಸೇರಿದಂತೆ ಬಹುತೇಕ ಕಚೇರಿಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಕೆ.ಜೆ. ಶಿವರಾಜ್, ಖಜಾಂಚಿ ಹೆಚ್.ವಿ. ವಿನೋದ್ ಕಾರ್ಯದರ್ಶಿ ಕೆ.ಕೆ. ನಾಗರಾಜ ಶೆಟ್ಟಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವನಿತಾ ಚಂದ್ರಮೋಹನ್, ಸದಸ್ಯರಾದ ಭೋಜಣ್ಣ ರೆಡ್ಡಿ ಮತ್ತು ಪಿ.ವಿ. ಅಕ್ಷಯ್ ಇದ್ದರು.

ಕಂದಾಯ ಇಲಾಖೆಯಲ್ಲಿ ಒಟ್ಟು ೩೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಲಿರುವ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಅವರನ್ನು ಇದೇ ಸಂದರ್ಭ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.