ಸೋಮವಾರಪೇಟೆ, ಜೂ. ೧: ಪ್ರವಾಸಿ ತಾಣವಾಗಿ ಹೆಸರು ಗಳಿಸುತ್ತಿರುವ ಬೇಳೂರು ಬಾಣೆ ಪ್ರದೇಶದಲ್ಲಿ ೭.೧೨ ಎಕರೆ ಜಾಗವು ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದ್ದು, ಈ ಪ್ರದೇಶಕ್ಕೆ ತೆರಳಲು ಸಾರ್ವಜನಿಕರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಗೆ ಜಿಲ್ಲಾಧಿಕಾರಿಗಳು ಮೀಸಲಿಟ್ಟ ಜಾಗವನ್ನೂ ಒಳಗೊಂಡAತೆ ಪೈಸಾರಿ, ಊರುಡುವೆ, ಕಡಂಗ ಜಾಗಕ್ಕೆ ಸೇರಿಸಿ ಸ್ಥಳೀಯ ಕ್ಲಬ್‌ನವರು ಬೇಲಿ ಅಳವಡಿಸಿದ್ದು, ಗೇಟ್‌ಗಳನ್ನು ನಿರ್ಮಿಸಿ ಬೀಗ ಹಾಕುವ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಆರೋಪಿಸಿ ಬೇಳೂರುಬಾಣೆ ಸಂರಕ್ಷಣಾ ಹೋರಾಟ ಸಮಿತಿ ಈಗಾಗಲೇ ಹೋರಾಟಕ್ಕೆ ಅಣಿಯಾಗುತ್ತಿದೆ.
ಈ ನಡುವೆ ಪ್ರವಾಸೋದ್ಯಮ ಇಲಾಖೆಗೆ ೦೬.೦೪.೨೦೧೬ರಂದು ಸ.ನಂ. ೧೪೩/೨ರ ೭.೧೨ ಎಕರೆ ಜಾಗವನ್ನು ಮೀಸಲಿಟ್ಟು ಅಂದಿನ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಈ ಜಾಗವನ್ನೂ ಒಳಗೊಂಡAತೆ ಸುತ್ತಮುತ್ತಲ ಪ್ರದೇಶಕ್ಕೆ ಬೀಗ ಹಾಕಲು, ಫೆನ್ಸಿಂಗ್ ಮಾಡಲು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲು ಇಲಾಖೆಯಿಂದ ಖಾಸಗಿ ಕ್ಲಬ್‌ನವರಿಗೆ ಅನುಮತಿ ನೀಡಲಾಗಿದೆಯೇ ಎಂದು ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗಳಿಗೆ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ‘ಇಲ್ಲ’ ಎಂದು ಲಿಖಿತ ಮಾಹಿತಿ ನೀಡಿದ್ದಾರೆ.
ಬೇಳೂರುಬಾಣೆಗೆ ಸಂಪೂರ್ಣವಾಗಿ ಬೇಲಿ ಅಳವಡಿಸಿರುವ ವಿಚಾರ ಈಗಾಗಲೇ ಸದ್ದು ಮಾಡುತ್ತಿದೆ. ಒಂದೆಡೆ ಪ್ರವಾಸಿಗರಿಗೆ ತಡೆಯಾಗಿದ್ದು, ಸ್ಥಳೀಯರಿಗೂ ಸಮಸ್ಯೆಯಾಗಿದೆ. ಈಗಾಗಲೇ ತಹಶೀಲ್ದಾರ್ ಸೂಚನೆಯಂತೆ ಸರ್ವೆ ಇಲಾಖೆಯಿಂದ ಬೇಳೂರು ಬಾಣೆಯ ಸರ್ವೆ ಕಾರ್ಯವೂ ನಡೆದಿದ್ದು, ಇನ್ನಷ್ಟೇ ವರದಿ ಬರಬೇಕಿದೆ. ಆ ವರದಿಯ ಆಧಾರದ ಮೇಲೆ ಮುಂದಿನ ಪ್ರಗತಿ ಕಾಣಬೇಕಿದೆ.
- ವಿಜಯ್