ಸಿದ್ದಾಪುರ, ಜೂ. ೧: ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ರಭಸವಾದ ಗಾಳಿಗೆ ಸಿಲುಕಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಗಾಳಿಗೆ ಸಿಲುಕಿ ಹಳೆಯ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ ಪರಿಣಾಮ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಸುತ್ತಮುತ್ತಲಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸೋಮವಾರದಂದು ಕೂಡ ವಿದ್ಯುತ್ ಸಮಸ್ಯೆ ಎದುರಾಗಿ ಕುಡಿಯುವ ನೀರು ಸರಬರಾಜು ಮಾಡಲು ಮತ್ತು ಮೊಬೈಲ್ ಚಾರ್ಜ್ ಮಾಡಲು ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಯಿತು. ವಿದ್ಯುತ್ ನಿಗಮದ ಸಿಬ್ಬಂದಿಗಳು ನಿನ್ನೆಯಿಂದಲೇ ದುರಸ್ತಿ ಕಾರ್ಯದಲ್ಲಿ ಹಾಗೂ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಗಡಿಗಳಲ್ಲಿ ಜನರೇಟರ್ ಬಳಸಿಕೊಂಡು ವರ್ತಕರು ವ್ಯಾಪಾರ ಮಾಡುತ್ತಿದ್ದಾರೆ. ಇದೀಗ ಡೀಸೆಲ್ ಬೆಲೆ ಏರಿಕೆ ಆಗಿದ್ದು ಅದು ಕೂಡ ಸಿದ್ದಾಪುರದಲ್ಲಿ ಸಿಗದೆ ಸಮಸ್ಯೆ ಎದುರಾಗಿದೆ.