ಸುಂಟಿಕೊಪ್ಪ, ಜೂ.೧: ಪ್ರಾರಂಭಿಕ ವರ್ಷಗಳಿಂದ ಈ ದೇವಾಲಯದ ಪ್ರಗತಿಪಥವನ್ನು ಹಂತ ಹಂತವಾಗಿ ನೋಡುತ್ತಾ ಬಂದಿದ್ದು, ಇಂದು ದೇವಾಲಯವು ಭಕ್ತಿ ಶೃದ್ಧೆಯ ಕೇಂದ್ರವಾಗಿ ಮಾತ್ರ ಉಳಿಯದೆ ಸಮಾಜಮುಖಿಯಾದ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಅದರ ರೂಪವಾಗಿ ರಘರಾಮ ಸಭಾಭವನದ ಉದ್ಘಾಟನೆ ನಡೆದಿದ್ದು ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿಯತ್ತ ದೇವರು ಅನುಗ್ರಹಿಸಲೆಂದು ಮಾಜಿ ಸಚಿವ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದರು. ಅವರು ಭಾನುವಾರದಂದು ಕಂಬಿಬಾಣೆಯಲ್ಲಿರುವ ಶ್ರೀರಾಮ ಮತ್ತು ಶ್ರೀಚಾಮುಂಡೇಶ್ವರಿ ದೇವಸ್ಥಾನದ ೧೧ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವದಲ್ಲಿ ಪಾಲ್ಗೊಂಡು ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ರಘುರಾಮ ಸಭಾಭವನದ ಉದ್ಘಾಟನೆ ನೇರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಂ.ಪಿ.ಅಪ್ಪಚ್ಚು ರಂಜನ್ ಅವರೊಂದಿಗೆ ಸಭಾ ಭವನದ ದಾನಿಗಳಾದ ಮ್ಯಾಗಡೂರು ತೋಟದ ಮಾಲೀಕರಾದ ಟಿ.ಕೆ ಸಜೀವ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರರಾದ ಟಿ.ಕೆ ಸಾಯಿಕುಮಾರ್ ಮತ್ತು ಟಿ.ಕೆ ರಾಜೀವ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಮಾತನಾಡಿದ ಟಿ.ಕೆ ಸಾಯಿಕುಮಾರ್, ತಮ್ಮ ತಂದೆ ಕುಮಾರನ್ ಅವರ ನೆನಪಿನಲ್ಲಿ ನಮ್ಮ ಹಿರಿಯ ಸಹೋದರ ಟಿ.ಕೆ ಸಜೀವ ಅವರು ಜನೋಪಯೋಗಿ ದೃಷ್ಟಿಯಿಂದ ರಘುರಾಮ ಸಭಾ ಭವನವನ್ನು ರೂ. ೭ ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ದೇವಾಲಯ ಸಮಿತಿ ಅಧ್ಯಕ್ಷರಾದ ಡಾ ಶಶಿಕಾಂತ ರೈ ಮತ್ತು ಅವರ ತಂಡ ಅಭಿನಂದನೆಗೆ ಅರ್ಹರಾಗಿದ್ದು, ಪ್ರತಿ ಯೊಬ್ಬರಿಂದ ಅಳಿಲು ಸೇವೆ ಅಪೇಕ್ಷಿಸಿ ಈ ಭವ್ಯವಾದ ಸಭಾ ಭವನವನ್ನು ನಿರ್ಮಿಸಿದ್ದಾರೆ. ಇಲ್ಲಿ ಸಂಗೀತ, ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು ಮುಂದುವರಿಯಲಿ ಎಂದು ಆಶಿಸಿದರು. ಕಂಬಿಬಾಣೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸರಕಾರದ ಶಿಕ್ಷಣ ಇಲಾಖೆ ವತಿಯಿಂದ ಎಲ್‌ಕೆಜಿ ಮತ್ತು ಯುಕೆಜಿ ವಿಭಾಗವನ್ನು ತೆರಯಲಾಗಿದ್ದು ಸ್ಥಳೀಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಈ ಸಂದರ್ಭ ಕರೆ ನೀಡಿದರು.

ಟಿ.ಕೆ ರಾಜೀವ್ ಮಾತನಾಡಿ, ಈ ದೇವಸ್ಥಾನದ ಆವರಣದಲ್ಲಿ ತಮ್ಮ ಒಂದನೇ ಮತ್ತು ೨ ತರಗತಿ ವಿದ್ಯಾಭ್ಯಾಸ ಮಾಡಿದ್ದನ್ನು ನೆನಪಿಸಿಕೊಂಡು ಇಂದು ದೇವಾಲಯ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹೆಮ್ಮರವಾಗಿ ಬೆಳೆದಿದ್ದನ್ನು ಪ್ರಂಶಸಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ಸಮಿತಿಯ ಅಧ್ಯಕ್ಷರಾದ ಡಾ ಶಶಿಕಾಂತ ರೈ ವಹಿಸಿ ದೇವಾಲಯದ ಹಂತ ಹಂತದ ಪ್ರಗತಿ ಚಿತ್ರಣವನ್ನು ನೀಡಿದರು. ಶಾಲಾ ವಿದ್ಯಾರ್ಥಿ ದರ್ಶನ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊAಡಿತು. ಕೀರ್ತನ ಅವರ ಭರತನಾಟ್ಯ ಗಮನ ಸೆಳೆಯಿತು. ಕಾರ್ಯಕ್ರಮವನ್ನು ಪೂರ್ಣಿಮ ಪ್ರಭಾಕರ್, ದೀಪಾ ಶಶಿಕಾಂತ ರೈ ನಿರೂಪಿಸಿ, ವಂದಿಸಿದರು. ಉದ್ಘಾಟನೆಗೂ ಮೊದಲು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಭಾಸ್ಕರ ಕಲ್ಲುರಾಯ, ಕ್ಷೇತ್ರದ ಅರ್ಚಕರಾದ ಪ್ರಭಾಕರ ಕುಂದಣ್ಣಯ್ಯ ನೇತೃತ್ವದಲ್ಲಿ ಪೂಜಾ ವಿಧಾನಗಳು ನಡೆದವು. ದಿನದ ಅಂಗವಾಗಿ ಗಣಪತಿ ಹೋಮ, ದುರ್ಗಾ ಹೋಮ, ರಾಮತಾರಕ ಹೋಮ, ಕಳಶಪೂಜೆ, ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವರಿಗೆ ಪಂಚಾಮೃತ ಅಭಿಷೇಕ ಸಹಿತ ಪಂಚವಿAಶತಿ ಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಸಹಭೋಜನ ನಡೆಯಿತು.