ಮಡಿಕೇರಿ, ಜೂ. ೧೦: ಮಡಿಕೇರಿ ನಗರದ ಮಹದೇವಪೇಟೆಯ ಎಸ್.ಎಸ್. ಆಸ್ಪತ್ರೆಯ ೫ನೇ ವಾರ್ಷಿಕೋತ್ಸವ ನಡೆಯಿತು.

ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಅವರು, ಇಬ್ಬರು ವಿಶೇಷಚೇತನ ಮಕ್ಕಳ ಪೋಷಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಎಸ್.ಎಸ್. ಆಸ್ಪತ್ರೆಯ ಆಡಳಿತ ಮಂಡಳಿ ೫ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಆಸ್ಪತ್ರೆ ವೈದ್ಯಕೀಯ ಸೇವೆಯೊಂದಿಗೆ ಸಮಾಜಕ್ಕೆ ಮಾದರಿಯಾದ ಕಾರ್ಯವನ್ನು ಮಾಡಿರುವುದು ಹೆಮ್ಮೆಯ ವಿಚಾರ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಮಾತನಾಡಿ, ಆಸ್ಪತ್ರೆಯ ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಿದೆ ಎಂದರು. ಎಸ್.ಎಸ್. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಶಿಲ್ಪಾ ಸತೀಶ್ ಮಾತನಾಡಿ, ಪ್ರತಿವರ್ಷ ವಾರ್ಷಿಕೋತ್ಸವವನ್ನು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿಯ ವಾರ್ಷಿಕೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆಗಳನ್ನು ವಿತರಿಸಲಾಗಿದೆ. ಪ್ರಸ್ತುತ ೫ನೇ ವಾರ್ಷಿಕೋತ್ಸವದ ಪ್ರಯುಕ್ತ ಇಬ್ಬರು ವಿಶೇಷಚೇತನ ಮಕ್ಕಳನ್ನು ಆಯ್ಕೆ ಮಾಡಿ ಆರ್ಥಿಕ ನೆರವು ಮತ್ತು ದೈನಂದಿನ ಬಳಕೆಯ ವಸ್ತುಗಳ ಕಿಟ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು. ಎಸ್.ಎಸ್. ಆಸ್ಪತ್ರೆಯ ವೈದ್ಯ ಡಾ. ಸತೀಶ್ ಮಾತನಾಡಿ, ಮುಂದಿನ ದಿನಗಳಲ್ಲಿ ೫೦ ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ ತಜ್ಞ ವೈದ್ಯರ ಸೇವೆಯನ್ನು ಜನರಿಗೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ನಗರಸಭೆ ಮಾಜಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಉದ್ಯಮಿ ಪ್ರದೀಪ್ ಕುಮಾರ್ ಕೆ.ಎಸ್. ಮಾತನಾಡಿದರು. ಮಡಿಕೇರಿ ನಗರದ ಎ.ಎಲ್.ಜಿ. ಕ್ರೆಸೆಂಟ್ ಸ್ಕೂಲ್‌ನ ಆಡಳಿತ ಮಂಡಳಿಯ ನಿರ್ದೇಶಕÀ ಹನೀಫ್, ಪ್ರಮುಖರಾದ ಹಂಝ, ಕವಿತಾ ಹಾಗೂ ಬಿ.ಎಸ್. ಮಣಿ ಉಪಸ್ಥಿತರಿದ್ದರು.