ವೀರಾಜಪೇಟೆ, ಜೂ. ೧೮: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯನ್ನು ಖಂಡಿಸಿ ಕ್ರಾಂತಿಕಾರಿ ಯುವಜನ ಸಂಘಟನೆ (ಆರ್.ವೈ.ಎ) ವತಿಯಿಂದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪಿ.ಸಿ. ಪ್ರವೀಣ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ, ಬೆಲೆ ಏರಿಕೆಯನ್ನು ಕೂಡಲೇ ನಿಯಂತ್ರಿಸುವAತೆ ಒತ್ತಾಯಿಸಲಾಯಿತು.

ಈ ವೇಳೆ ಸಂಘಟನೆಯ ಗೌರವಾಧ್ಯಕ್ಷ ಎಂ.ಕೆ. ಮೋಹನ್ ಮಾತನಾಡಿ, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವುದಲ್ಲದೆ, ಉಜ್ವಲ ಯೋಜನೆಯ ಸಬ್ಸಿಡಿಯನ್ನು ಕಡಿತಗೊಳಿಸಿರುವುದರಿಂದ ಬಡವರು ಹಾಗೂ ಕಾರ್ಮಿಕ ವರ್ಗದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂದು ಆರೋಪಿಸಿದರು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಕಾರ್ಮಿಕರು ಹಾಗೂ ಸಾಮಾನ್ಯ ಜನರ ಆದಾಯದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದ್ದರಿಂದ ಸರ್ಕಾರ ಇಂಧನದ ಮೇಲಿನ ತೆರಿಗೆಗಳನ್ನು ಕಡಿತಗೊಳಿಸಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ತಕ್ಷಣ ಇಳಿಸಬೇಕು ಎಂದು ಅವರು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಪಿ.ಸಿ. ಪ್ರವೀಣ್ ಕುಮಾರ್, ಸರ್ಕಾರದ ಗಮನಕ್ಕೆ ಮನವಿಯನ್ನು ತಲುಪಿಸುವ ಕೆಲಸವನ್ನು ಆಡಳಿತದಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ತೋಲ, ಕಾರ್ಯದರ್ಶಿ ಪಿ.ಎಂ. ರಾಜೇಶ್, ಪಿ.ಬಿ. ಮಂಜು, ಆದಿವಾಸಿ ಸಂಘಟನೆಯ ಪಿ.ಎಂ. ಗೌರಿ, ಮುತ್ತ, ಸುಬ್ರಮಣಿ, ರಾಜು, ಮಾರ, ಸರಸು, ಪೊನ್ನಕ್ಕಿ, ರವಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.