ಸೋಮವಾರಪೇಟೆ, ಜೂ. ೧೮: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಆಯ್ದ ಸರಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಅನುಷ್ಠಾನಗೊಂಡಿದ್ದು, ಇದನ್ನು ಪರಿಶೀಲಿಸಲು ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕರ ತಂಡ ಐಗೂರು ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿತು.
ಶಾಲಾ ಮಕ್ಕಳಿಂದ ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆ ಮತ್ತು ವಿಜ್ಞಾನ ಪ್ರಯೋಗಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಹಿರಿಯ ಉಪನ್ಯಾಸಕರಾದ ಬಿ.ಎನ್. ಪುಷ್ಪ ಮಾತನಾಡಿ, ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಅತ್ಯುತ್ತಮ ಸೌಲಭ್ಯಗಳು ದೊರೆಯು ತ್ತಿದ್ದು, ವಿದ್ಯಾರ್ಥಿಗಳು ಸರಕಾರದ ಸೌಲಭ್ಯ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.ವಿಜ್ಞಾನ ಪ್ರಯೋಗಾಲಯಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವದ ಕಲಿಕೆಗೆ ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಿಸಿದರು.
ಡಯಟ್‌ನ ಕಾರ್ಯಾನುಭವ ಉಪನ್ಯಾಸಕರಾದ ಪಿ.ಪಿ.ಗಾಯಿತ್ರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಎಸ್. ಶಿವಕುಮಾರ್ ಪರಿಶೀಲನಾ ತಂಡದಲ್ಲಿದ್ದರು. ಈ ಸಂದರ್ಭ ಮುಖ್ಯ ಶಿಕ್ಷಕರಾದ ಯಶ್ವಂತ್ ಕುಮಾರ್, ವಿಜ್ಞಾನ ಶಿಕ್ಷಕರಾದ ಎಸ್.ಎಸ್. ರಂಜಿನಿ ಮತ್ತು ಸಹ ಶಿಕ್ಷಕರು ಇದ್ದರು.