ಸಿದ್ದಾಪುರ, ಜೂ. ೧೮: ಮನೆಯ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿರುವ ಘಟನೆ ದೊಡ್ಡ ರೇಷ್ಮೆಹಡ್ಲು ಹಾಡಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ದೊಡ್ಡ ರೇಷ್ಮೆಹಡ್ಲು ಹಾಡಿಯ ನಿವಾಸಿಯಾಗಿರುವ ಪಾಪು ಎಂಬವರ ಮನೆಗೆ ಬೆಳಗ್ಗಿನ ಜಾವ ಅಂದಾಜು ೫.೩೦ರ ಸಮಯಕ್ಕೆ ಕಾಡಾನೆ ದಾಳಿ ನಡೆಸಿದ್ದು, ಪಾಪು ಅವರ ಕುಟುಂಬಸ್ಥರು ಆತಂಕದಿAದ ಮನೆಯೊಳಗೇ ಇದ್ದು ಅಪಾಯದಿಂದ ಪಾರಾಗಿದ್ದಾರೆ. ಕಾಡಾನೆ ಮನೆಗೆ ದಾಳಿ ನಡೆಸಿದ ಪರಿಣಾಮ ಮನೆಯ ಗೋಡೆ ಮತ್ತು ಹೆಂಚುಗಳಿಗೆ ಹಾನಿಯಾಗಿದೆ. ಈ ಬಗ್ಗೆ ಪಾಪು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಚೆನ್ನವೀರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.