ನಾಪೋಕ್ಲು, ಜೂ. ೧೮: ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ೨೦೨೬-೨೭ನೇ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಸದಸ್ಯರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು. ಶಾಲಾ ನಾಯಕನಾಗಿ ಗೇಲ್ ಪೊನ್ನಣ್ಣ, ನಾಯಕಿಯಾಗಿ ರಿಚ್ಚ ಪೂಣಚ್ಚ, ಕ್ರೀಡಾ ನಾಯಕನಾಗಿ ಲಿತನ್ ಪೂಣಚ್ಚ, ಕ್ರೀಡಾ ನಾಯಕಿಯಾಗಿ ಶ್ರಾವ್ಯ ಮುತ್ತಮ್ಮ ಹಾಗೂ ವಿವಿಧ ಸದನಗಳ ನಾಯಕರಿಗೆ ಜವಾಬ್ದಾರಿಗಳನ್ನು ವಹಿಸಲಾಯಿತು. ಬಳಿಕ ನೂತನ ಪದಾಧಿಕಾರಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಶಾಲಾ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ, ಶಿಸ್ತು ಮತ್ತು ಜವಾಬ್ದಾರಿಯ ಗುಣಗಳನ್ನು ಬೆಳೆಸಿಕೊಳ್ಳುವ ಮಹತ್ವವನ್ನು ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ಮಮತಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಿಕ್ಷಕಿ ಆಶಾ ಬೋಪಣ್ಣ, ಬೋಧಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.