ಐಗೂರು, ಜೂ. ೨೧: ಸಾರ್ವಜನಿಕರ ಅನುಕೂಲ ಕ್ಕಾಗಿ ನಿರ್ಮಿಸಿರುವ ಬಸ್ ಪ್ರಯಾಣಿಕರ ತಂಗುದಾಣ ಇದೀಗ ಪಾನಪ್ರಿಯರ ವಿಶ್ರಾಂತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಮಹಿಳೆ ಯರು ಹಾಗೂ ಶಾಲಾ ವಿದ್ಯಾರ್ಥಿಗಳು ತಂಗು ದಾಣದ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗಿದೆ.
ಐಗೂರು ಸೇತುವೆ ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗದ ಐಗೂರು ಜಂಕ್ಷನ್‌ನಲ್ಲಿ ಇರುವ ಬಸ್ ತಂಗುದಾಣವನ್ನು ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪ್ರಯಾಣಿಕರು ಬಳಸಬೇಕಾಗಿದೆ. ಆದರೆ ತಂಗುದಾಣದೊಳಗೆ ರಾಶಿ ರಾಶಿ ಖಾಲಿ ಬ್ರಾಂಡಿ, ಬಿಯರ್ ಬಾಟಲಿಗಳು, ನೀರಿನ ಖಾಲಿ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಲೋಟಗಳು ಕಂಡುಬAದಿದ್ದು ಇದು ಪ್ರಯಾಣಿಕರ ಆಶ್ರಯಕ್ಕಿಂತ ಕುಡುಕರ ಅಡ್ಡೆಯಾಗಿ ಬದಲಾಗಿದೆ.
ಪಾನ ಪ್ರಿಯರು ಕಣ್ಣಿಗೆ ಬೀಳಬಾರದು, ಹೆಂಡತಿ ಪ್ರಶ್ನೆ ಕೇಳಬಾರದು ಎಂಬ ಉದ್ದೇಶದಿಂದ ಸಾರ್ವಜನಿಕರ ತಂಗುದಾಣವನ್ನೇ ತಮ್ಮ ಖಾಸಗಿ ಬಾರ್ ಎಂದು ಭಾವಿಸಿರುವಂತಿದೆ. ಮಳೆಗಾಲದಲ್ಲಿ ಪ್ರಯಾಣಿಕರಿಗೆ ಬಸ್ ತಂಗುದಾಣವೇ ಆಶ್ರಯವಾಗಿದ್ದು, ಐಗೂರಿನಲ್ಲಿ ತಂಗುದಾಣಗಳು ಮೂಲೆಗುಂಪಾಗಿದೆ ಎಂದು ಐಗೂರು ಗ್ರಾಮದ ಧರಣಿ ಸ್ವಸಹಾಯಕ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಿತಿಗತಿಯನ್ನು ಕಂಡ ಧರಣಿ ಸ್ವ ಸಹಾಯಕ ಸಂಘದ ಸದಸ್ಯರಾದ ಸಬಿತ ಚೆನ್ನಕೇಶವ, ಗೀತಾ ಆನಂದ, ರೂಪ ದಾಮೋದರ, ರೇಣುಕಾ ಗಣೇಶ್, ಮತ್ತು ಬಾರನ ಅನಿತ ಬಸ್ ತಂಗುದಾಣದಲ್ಲಿದ್ದ ಮಧ್ಯದ ಖಾಲಿ ಬಾಟಲಿಗಳನ್ನು ಚೀಲದಲ್ಲಿ ಶೇಖರಿಸಿ ತಂಗುದಾಣವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ಮೂರು ತಿಂಗಳ ಹಿಂದೆ ಟಾಟಾ ಕಾಫಿಯ ಕಾರ್ಮಿಕರು ಈ ಭಾಗದಲ್ಲಿ ಖಾಲಿ ಮಧ್ಯದ ಬಾಟಲಿಗಳನ್ನು ಶೇಖರಿಸಿ ಸ್ವಚ್ಛತೆಯನ್ನು ಮಾಡಿದರು. ಆದರೆ ಪಾನಪ್ರಿಯರು ಅದನ್ನು ಸವಾಲಾಗಿ ಸ್ವೀಕರಿಸಿದರೋ ಏನೋ ಮತ್ತೆ ಬಾಟಲಿಗಳನ್ನೇ ತುಂಬಿಸಿದ್ದಾರೆ ಎಂದು ಧರಣಿ ಸ್ವ ಸಹಾಯಕ ಸಂಘದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಐಗೂರಿನ ಕಬ್ಬಿಣ ಸೇತುವೆ ಹಾಗೂ ಕಾಜೂರು ಭಾಗದ ಬಸ್ ತಂಗುದಾಣಗಳು ಭಿಕ್ಷುಕರ ಮತ್ತು ಪಾನಪ್ರಿಯರ ಅಡ್ಡೆಯಾಗುತ್ತಿದ್ದು, ಗ್ರಾಮೀಣ ಸೌಂದರ್ಯಕ್ಕೆ ಮಸಿಬಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಸಿಸಿಟಿವಿ ಅಳವಡಿಸಿ ಸಾರ್ವಜನಿಕ ಸ್ಥಳದಲ್ಲಿ ಬಾಟಲಿ ಎಸೆಯುವವರನ್ನು ಪತ್ತೆ ಹಚ್ಚಬೇಕಾಗಿದೆ.
ಸ್ವಚ್ಛ ಭಾರತದ ಅಭಿಯಾನ ಒಂದು ಕಡೆ ನಡೆಯುತ್ತಿದ್ದರೆ ಖಾಲಿ ಬಾಟಲಿ ಭಾರತ ಅಭಿಯಾನ ಮತ್ತೊಂದು ಕಡೆ ನಡೆಯುವಂತಿದೆ.ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡರೆ ಮಾತ್ರ ಬಸ್ ತಂಗುದಾಣ ಮತ್ತೆ ಪ್ರಯಾಣಿಕರಿಗೆ ಮುಕ್ತವಾಗಲಿದೆ.
- ಸುಕುಮಾರ್.