ಮಡಿಕೇರಿ, ಜೂ. ೨೫: ಕೊಡಗು ಜಿಲ್ಲೆಯ ಶಾಮಿಯಾನ ಮತ್ತು ಡೆಕೊರೇಷನ್ ಕ್ಷೇತ್ರದ ಉದ್ಯಮಿ ಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಸೌಂಡ್, ಲೈಟ್, ಶಾಮಿಯಾನ, ಡೆಕೊರೇಷನ್ ಅಸೋಸಿಯೇಷನ್ ಅನ್ನು ಸ್ಥಾಪಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಅಜ್ಜೆಟ್ಟಿರ ಲೋಕೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಈಗಾಗಲೇ ೮೦ ಸದಸ್ಯರು ಸಂಘದಲ್ಲಿ ನೋಂದಣಿಯಾಗಿದ್ದು, ಇನ್ನೂ ಹೆಚ್ಚಿನವರು ಸದಸ್ಯತ್ವ ಪಡೆಯುವಂತೆ ಮನವಿ ಮಾಡಿದರು.
ಸದಸ್ಯರಿಗೆ ಆರೋಗ್ಯ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಸಂಘದ ವತಿಯಿಂದ ನೆರವು ನೀಡಲಾಗುವುದು ಎಂದು ಹೇಳಿದರು. ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅವಿನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಧಿಕೃತ ಪರವಾನಗಿ ಹೊಂದಿರುವ ಸಂಸ್ಥೆಗಳ ಸೇವೆಯನ್ನು ಮಾತ್ರ ಸಾರ್ವಜನಿಕರು ಬಳಸಬೇಕು.
ಕೆಲವೆಡೆ ಒಪ್ಪಂದವಿಲ್ಲದೆ ಮುಂಗಡ ಹಣ ಪಡೆದು ವಂಚಿಸುವ ಘಟನೆಗಳು ನಡೆಯುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯಲು ಸಂಘಟನೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಡಿಕೇರಿ, ಸೋಮವಾರ ಪೇಟೆ ಹಾಗೂ ವಿರಾಜಪೇಟೆ ತಾಲೂಕುಗಳಲ್ಲಿ ಆಧುನಿಕ ತಂತ್ರಜ್ಞಾನ, ಸುರಕ್ಷತಾ ಕ್ರಮಗಳು ಮತ್ತು ವೃತ್ತಿಪರ ಕೌಶಲ್ಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದರು.
ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಅವರನ್ನು ಆರ್ಥಿಕವಾಗಿ ಸಬಲಗೊಳಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಜುಲೈ ಅಂತ್ಯದೊಳಗೆ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದೇ ವೇಳೆ ನೋಂದಾಯಿತ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಸಂಘದ ನೂತನ ಸಮಿತಿಗೆ ಅಧ್ಯಕ್ಷರಾಗಿ ಅಜ್ಜೆಟ್ಟಿರ ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ಅವಿನ್ ಕುಮಾರ್, ಕಾರ್ಯದರ್ಶಿಗಳಾಗಿ ರವೀಂದ್ರ ಮತ್ತು ಹರೀಶ್, ಖಜಾಂಚಿಯಾಗಿ ಎಚ್.ಪಿ. ಲೋಕೇಶ್ ಆಯ್ಕೆಯಾಗಿದ್ದಾರೆ. ಜೊತೆಗೆ ನಾಲ್ವರು ಉಪಾಧ್ಯಕ್ಷರು ಹಾಗೂ ಒಂಬತ್ತು ನಿರ್ದೇಶಕರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಎಚ್.ಪಿ. ಲೋಕೇಶ್, ಕಾರ್ಯದರ್ಶಿ ರವೀಂದ್ರ ಹಾಗೂ ನಿರ್ದೇಶಕರಾದ ಬಿದ್ರುಪಣೆ ಉಜ್ವಲ್ ಮತ್ತು ಯಾಸೀನ್ ಉಪಸ್ಥಿತರಿದ್ದರು.