ವೀರಾಜಪೇಟೆ, ಜೂ. ೨೬: ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೊಡಗು ಜಿಲ್ಲಾ ಪೊಲೀಸ್ ಹಾಗೂ ವೀರಾಜಪೇಟೆ ನಗರ ಪೊಲೀಸ್ ಠಾಣೆ ವತಿಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ವೀರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಕುಮಾರ್ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ನೂರಾರು ದ್ವಿಚಕ್ರ ವಾಹನ ಸವಾರರು ಹಾಗೂ ನಗರದ ಆಟೋ ಚಾಲಕರು ಭಾಗವಹಿಸಿ ಮಾದಕ ವಸ್ತುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತನಾಡಿ, ಮಾದಕ ದ್ರವ್ಯಗಳು ಕೇವಲ ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಇಡೀ ಕುಟುಂಬ ಮತ್ತು ಸಮಾಜವನ್ನು ದುರ್ಬಲಗೊಳಿಸುತ್ತವೆ. ಮಾದಕ ವ್ಯಸನದ ಬಲೆಗೆ ಬೀಳದಂತೆ ಯುವಜನತೆ ಎಚ್ಚರ ವಹಿಸಬೇಕು ಎಂದರು.

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ "ಮಾದಕ ಮುಕ್ತ ಕೊಡಗು" ಅಭಿಯಾನದ ಭಾಗವಾಗಿ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಅಥವಾ ಬಳಕೆ ಕಂಡುಬAದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಯಿತು.