ಮಡಿಕೇರಿ, ಜೂ. ೨೬: ಮಲ್ಮ ಬೆಟ್ಟದ ಸಮೀಪ ಕಟ್ಟಡ ಕಾಮಗಾರಿ ನಡೆಸುವ ಸಂದರ್ಭ ಮರಗಳ ಹನನ ಹಾಗೂ ಬಂಡೆಗಳ ಸ್ಫೋಟ ನಡೆದಿರುವ ಅನುಮಾನಗಳಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಆಗ್ರಹಿಸಿದ್ದು, ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ಈ ಪ್ರದೇಶದಲ್ಲಿ ಮರಗಳು, ಬೆತ್ತ ಹಾಗೂ ಇತರ ಗಿಡಮರಗಳನ್ನು ಕಡಿಯಲಾಗಿದೆ. ಅಲ್ಲದೆ ಬಂಡೆಗಳನ್ನು ಸ್ಫೋಟಿಸಿದ್ದು, ಇದಕ್ಕೆ ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ತನಿಖೆ ನಡೆಸಿ ನೈಜಾಂಶ ಹೊರತರಬೇಕು. ಅನುಮತಿ ನೀಡಿದ್ದಲ್ಲಿ ಯಾವ ಕಾನೂನಿನಡಿ ನೀಡಲಾಗಿದೆ ಎಂದು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ಸೂಕ್ಷö್ಮ ಪರಿಸರವಾದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮರಗಳನ್ನು ಕಡಿಯಲು, ಬೆಟ್ಟಗುಡ್ಡಗಳನ್ನು ಕೊರೆಯಲು ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬದರ ಜಿಲ್ಲಾಧಿಕಾರಿಯ ಉತ್ತರವನ್ನು ಸಂಘಟನೆ ಬಯಸಿತ್ತು. ಆದರೆ, ಇದುವರೆಗೂ ಉತ್ತರ ದೊರೆತ್ತಿಲ್ಲ ಎಂದು ಅತೃಪ್ತಿ ವ್ಯಕ್ಯಪಡಿಸಿದರು. ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ ಮಾತನಾಡಿ, ಬೆತ್ತವನ್ನು ಅನುಮತಿರಹಿತವಾಗಿ ಕಡಿಯುವುದು ಅಪರಾಧವಾಗಿದ್ದು, ಮಲ್ಮಭಾಗದಲ್ಲಿ ಬೆತ್ತವನ್ನು ನಾಶಮಾಡಲಾಗಿದೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಅಚ್ಚಾಂಡಿರ ಕುಶಾಲಪ್ಪ, ನಿರ್ದೇಶಕರುಗಳಾದ ಮಚ್ಚಮಾಡ ಅನೀಶ್ ಮಾದಪ್ಪ, ಅಪ್ಪಂಡೇರAಡ ಯಶ್ವಂತ್ ಹಾಜರಿದ್ದರು.