ವೀರಾಜಪೇಟೆ, ಜೂ. ೨೬: ಬಿಳುಗುಂದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಚುನಾವಣಾ ಪ್ರಕ್ರಿಯೆಯಂತೆ ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ, ಮತ ಎಣಿಕೆಯಾಗಿ ಮಂತ್ರಿಗಳು ಆಯ್ಕೆಯಾದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಸಂಸ್ಥೆ ಸದಸ್ಯ ಶಶಿಧರ್, ಎಸ್ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಸದಸ್ಯರು, ಮುಖ್ಯ ಅತಿಥಿಗಳಾದ ಚುಪ್ಪ ನಾಗರಾಜು ಹಾಗೂ ರಾಜೇಶ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ ಮುಖ್ಯ ಶಿಕ್ಷಕ ಡಾ. ರವಿ ಆರ್. ಮಾತನಾಡಿ, ಶಿಸ್ತು, ನಾಯಕತ್ವ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಈ ವಿದ್ಯಾರ್ಥಿ ಸಂಘವು ಒಂದು ವೇದಿಕೆಯಾಗಿದೆ ಎಂದರು. ಮತದಾರರ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಲೀಲಾವತಿ ನೂತನ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿದ್ದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಸಂಸ್ಥೆ ಸದಸ್ಯ ಶಶಿಧರ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮತ್ತು ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ರಾಜೇಶ್ ಮಾತನಾಡಿ, ಗುರಿ ಸಾಧಿಸಲು ನಿರಂತರ ಪ್ರಯತ್ನ ಹಾಗೂ ದೃಢ ಸಂಕಲ್ಪ ಅಗತ್ಯ ಎಂದರು. ಶಾಲೆಯ ಹಿರಿಯ ಶಿಕ್ಷಕಿ ಅರುಣಾ ಆನ್ಸಿ ಡಿಸೋಜಾ, ಸಹ ಶಿಕ್ಷಕಿಯರಾದ ಲೀಲಾವತಿ ವಿ.ಆರ್., ಭವ್ಯ ಪಿ.ಎಸ್. ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ಲಲಿತಾ, ಅನಿತಾ, ಸವಿತಾ ಮಹದೇವ ನಾಯಕ, ರೂಪಾ ಲೋಕೇಶ್ ಹಾಗೂ ವಿದ್ಯಾರ್ಥಿಗಳ ಪೋಷಕರು, ಅಡುಗೆ ಸಿಬ್ಬಂದಿ ಹಾಜರಿದ್ದರು.