ಪೊನ್ನಂಪೇಟೆ, ಜೂ. ೨೬: ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಆಚರಿಸಲಾಗುವ ‘ಬ್ಯಾಗ್‌ಲೆಸ್ ಡೇ’ ಅಂಗವಾಗಿ ಶಾಲಾ ಸಂಸತ್ ಚುನಾವಣೆ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಮೊಬೈಲ್ ಫೋನ್‌ನಲ್ಲಿನ ಇವಿಎಂ ಆ್ಯಪ್ ಬಳಸಿ ವಿದ್ಯುನ್ಮಾನ ಮತಯಂತ್ರದ ಮಾದರಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಮತ ಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.
ಈ ಮೂಲಕ ಚುನಾವಣಾ ವ್ಯವಸ್ಥೆ, ಮತದಾರರ ಹಕ್ಕು, ಮತದಾನದ ಗೌಪ್ಯತೆ ಹಾಗೂ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಪಾತ್ರದ ಕುರಿತು ಮಕ್ಕಳಿಗೆ ಪ್ರಾಯೋಗಿಕ ಅರಿವು ಮೂಡಿಸಲಾಯಿತು. ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಂ.ಜಿ. ನಗರದ ಪ್ರತಿಭಾವಂತ ವಿಶೇಷಚೇತನ ಯುವಕ ಹಾಗೂ ಪದವೀಧರ ಧನುಷ್ ವಿಶೇಷ ಅತಿಥಿಯಾಗಿ ಭಾಗವಹಿಸಿ, ವಿಶೇಷಚೇತನರು ಎದುರಿಸುವ ಸವಾಲುಗಳು, ಅವರ ಸಾಧನೆಗಳು ಹಾಗೂ ಸಮಾಜದಲ್ಲಿ ಅವರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಮುಖ್ಯ ಶಿಕ್ಷಕ ವಿಜಯ್ ಬಿ.ಎಂ., ಶಿಕ್ಷಕರಾದ ಶಕೀಲ ಬಾನು ಎಂ.ಎನ್., ರೋಜಿ ಐ.ಎಂ., ವಿನಿತಾ ಕೆ.ಆರ್, ಗಂಗಾಮಣಿ ಸಿ.ಪಿ., ನಿಂಗರಾಜ್ ಎನ್., ಮಹೇಶ್ ಟಿ.ಎಸ್., ವೆಂಕಟೇಶ್, ಸಂತೋಷ್ ಕುಮಾರ್ ಲೋಬೊ, ರೇಖಾ ಪಿ.ಎ., ಪೂರ್ಣಿಮಾ ಸಿ.ಪಿ, ಶಾಹಿದ್ ಕೆ.ಬಿ., ಮಂಜುಳ ಆರ್., ಅತಿಥಿ ಶಿಕ್ಷಕಿ ಹಸೀನಾ ಎಂ.ಎಸ್. ಉಪಸ್ಥಿತರಿದ್ದರು.