ಐಗೂರು, ಜೂ. ೨೬: ಹಾರಂಗಿ ಜಲಾಶಯ ನಿರ್ಮಾಣದ ಸಂದರ್ಭ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ೧೯೭೭ ರಲ್ಲಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಹಾರಂಗಿ ಹಿನ್ನೀರಿನ ಪ್ರದೇಶದ ಸಂತ್ರಸ್ತರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿತ್ತು.
ಮುಳುಗಡೆಯಾದ ಪ್ರದೇಶದ ಸುತ್ತಲೂ ಜಲಾವೃತಗೊಂಡಿರುವ ಸುಮಾರು ೫೦ ಎಕರೆ ಪ್ರದೇಶವು ದ್ವೀಪದಂತೆ ಗೋಚರಿಸುತ್ತಿದ್ದು ‘ಮುಟ್ಲು’ ಎಂಬ ಹೆಸರಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ರಮಣೀಯ ತಾಣವಾಗಿ ಬೆಳೆಯುತ್ತಿದೆ. ಆದರೆ ಇತ್ತೀಚೆಗೆ ಈ ಪ್ರದೇಶದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಅಂದಾಜು ೭ ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿ ರೆಸಾರ್ಟ್ ಹಾಗೂ ಹೋಂಸ್ಟೇ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಗ್ರಾಮಸ್ಥರು ಅತಿಕ್ರಮಣ ವಿರೋಧಿಸಿ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ಸೋಮವಾರಪೇಟೆ ತಹಶೀಲ್ದಾರರು ಹಾಗೂ ಹಾರಂಗಿ ಜಲಾಶಯದ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿ ತಹಶೀಲ್ದಾರರ ಸೂಚನೆಯ ಮೇರೆಗೆ ಕಂದಾಯ ಪರಿವೀಕ್ಷಕ ಪ್ರಹ್ಲಾದ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ನೇಹ ಗೌಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಭೂ ಸ್ವಾಧೀನಗೊಂಡ ಜಮೀನಿನಲ್ಲಿ ಅತಿಕ್ರಮಣ ನಿಷೇಧದ ಎಚ್ಚರಿಕೆ ನೀಡುವ ನಾಮಫಲಕ ಅಳವಡಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಗ್ರಾಮಸ್ಥರು, ಜಲಾಶಯದ ವ್ಯಾಪ್ತಿಯ ಭೂಮಿ ಅತಿಕ್ರಮಣ ಹಾಗೂ ಮರ ಕಡಿತದ ಬಗ್ಗೆ ಸಂಬAಧಪಟ್ಟ ಇಲಾಖೆಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥರಾದ ವಿಶ್ವನಾಥ ರಾಜೇ ಅರಸ್, ಹೆಚ್.ಎ. ನಾಗರಾಜು, ಕೆ.ಬಿ. ಆನಂದ, ಪಿ.ಕೆ. ಗಣಪತಿ, ಕೆ.ಡಿ. ಹೊನ್ನಪ್ಪ, ನಾರ್ಕೋಡಿ ವಸಂತ, ದಿನೇಶ, ಪದ್ಮನಾಭ ಆಚಾರಿ, ಬಿ.ಕೆ. ವಿಜು, ಮಧು ಹಾಗೂ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.