ಸಿದ್ದಾಪುರ, ಜೂ. ೨೭ : ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಪಾಲಿಬೆಟ್ಟ ಸಮೀಪದ ಹೊಸೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ಹೊಸೂರು ಹಂಚಿಬೆಟ್ಟದ ನಿವಾಸಿ ಯಾಗಿರುವ ನಿಲಾನ್ ಟಾಮ್ (೨೪) ಎಂಬವರು ತಮ್ಮ ಬೈಕಿನಲ್ಲಿ ಕೆಲಸದ ನಿಮಿತ್ತ ಅಮ್ಮತ್ತಿಗೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಗೋಣಿಕೊಪ್ಪಲಿನಿಂದ ಹೊಸೂರು ಮಾರ್ಗವಾಗಿ ವೀರಾಜಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು ಅಪಘಾತದ ಸಂದರ್ಭ ಬೈಕ್ ಸವಾರ ನಿಲಾನ್ ಟಾಮ್ ರಸ್ತೆಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯವಾಗಿದೆ.

ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.