ನಾಪೋಕ್ಲು, ಜೂ. ೨೭: ಮಲ್ಮ ಬೆಟ್ಟದ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ನೆಲಜಿ ಗ್ರಾಮಸ್ಥರು ಒಗ್ಗೂಡಿ ಒಂದು ಸಮಿತಿಯನ್ನು ರಚಿಸಿ ಸಂಚಾಲಕರನ್ನು ನೇಮಕ ಮಾಡಿ ಆ ಮೂಲಕ ಜಿಲ್ಲೆಯ ಅಸ್ಮಿತೆಗೆ ಧಕ್ಕೆ ತರುವ ಯಾವುದೇ ವಿಷಯದ ಕುರಿತು ನಿರ್ಣಯ, ಹೋರಾಟಗಳನ್ನು ಕೈಗೊಳ್ಳಬೇಕು ಎಂದು ಪುಲಿಕೋಟು ಗ್ರಾಮದ ಕೋಟೆ ಭಗವತಿ ದೇವಾಲಯದ ಅಧ್ಯಕ್ಷ ಕರವಂಡ ಲವ ನಾಣಯ್ಯ ಹೇಳಿದರು.
ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೆಲಜಿ ಗ್ರಾಮದ ದವಸ ಭಂಡಾರದಲ್ಲಿ ಮಲ್ಮ ಪರಿಸರ ರಕ್ಷಣೆಗಾಗಿ ಗ್ರಾಮಸ್ಥರ ಅಭಿಪ್ರಾಯ ಪಡೆಯಲು ಆಯೋಜಿಸಲಾಗಿದ್ದ ಗ್ರಾಮಸ್ಥರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಊರಿನವರಲ್ಲಿ ಒಗ್ಗಟ್ಟು, ವಿಶ್ವಾಸ ಇದ್ದರೆ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯ. ಜಿಲ್ಲೆಯಲ್ಲಿ ಹಲವು ಸಂಘಟನೆಗಳಿವೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಊರಿನವರು ಒಗ್ಗೂಡಿ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿದಲ್ಲಿ ಖಂಡಿತ ಗೆಲುವು ಸಾಧ್ಯ ಎಂದರು.
ಪೇರೂರು ಇಗ್ಗುತಪ್ಪ ದೇವಾಲಯದ ಅಧ್ಯಕ್ಷ ಮಚ್ಚುರ ರವೀಂದ್ರ ಮಾತನಾಡಿ, ಇದು ಗ್ರಾಮದ ಆಂದೋಲನವಲ್ಲ; ಕೊಡಗಿನ ಆಂದೋಲನ. ಜಿಲ್ಲೆಗೆ ತೊಂದರೆ ಬಂದರೆ ಒಗ್ಗಟ್ಟಾಗಿ ಸಮಸ್ಯೆಯನ್ನು ಎದುರಿಸಬೇಕು. ಜನರ ಧಾರ್ಮಿಕ ಭಾವನೆಗೆ ಚ್ಯುತಿ ತರುವ ಮಲ್ಮ ಬೆಟ್ಟದ ಜಾಗ ವಿವಾದಕ್ಕೆ ಸಂಬAಧಿಸಿದ ಆಂದೋಲನ ಇಲ್ಲಿಗೇ ನಿಲ್ಲಬಾರದು ಎಂದರು. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಮಾತನಾಡಿ ಕೊಡಗು ಕೊಡಗಾಗಿ ಉಳಿಯಬೇಕು.ಮಲ್ಮ ಬೆಟ್ಟದ ಪರಿಸರಕ್ಕೆ ಧಕ್ಕೆ ಬರಬಾರದು. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಅವರ ಸ್ಥಾನಮಾನÀಕ್ಕೆ ತಕ್ಕಂತೆ ನಡೆದುಕೊಳ್ಳುವುದು ಮುಖ್ಯವಾಗಿದ್ದು, ಕೊಡವ ಸಂಸ್ಕೃತಿ ಉಳಿಯಲು ಆಂದೋಲನ ಸಮಿತಿಯ ರಚನೆ ಅಗತ್ಯ ಎಂದರು.
ಕೊಡವ ಜನಾಂಗ ಯಾವುದೇ ಕಾರಣಕ್ಕೂ ಜಾಗ ಮಾರಾಟ ಮಾಡಬಾರದು. ಈಗ ಮಾರಾಟವಾಗಿರುವ ಜಾಗವನ್ನು ಕೊಡವರು ಖರೀದಿಸಲಿ. ಇಲ್ಲಿ ಪ್ರವಾಸೋದ್ಯಮದ ಅಗತ್ಯವಿಲ್ಲ. ಕೃಷಿ ಚಟುವಟಿಕೆ ಆಗಲಿ. ಕಾನೂನು ಪ್ರಕಾರ ಆಸ್ತಿ ಮರು ಖರೀದಿಸಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ಮಲ್ಮದಿಂದ ಮಡಿಕೇರಿಗೆ ಪಾದಯಾತ್ರೆ ಕೈಗೊಳುವÀ ಮೂಲಕ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಅರಿವು ಮೂಡಿಸಬೇಕು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ತಕ್ಕ ಮುಖ್ಯಸ್ಥರಾದ ಬದ್ದಂಜೆಟ್ಟಿರ ನಾಣಯ್ಯ, ಬಾಳೆಯಡ ಕುಂಞಪ್ಪ , ನಾಪನೆರವಂಡ ದೇವಯ್ಯ, ಪ್ರಮುಖರಾದ ಬಾಳೆಯಡ ಬೆಳ್ಳಿಯಪ್ಪ, ಕೈಬುಲಿರ ಗಣಪತಿ ಸೇರಿದಂತೆ ನೆಲಜಿ ಬಲ್ಲಮಾವಟಿ ಮತ್ತು ಪೇರೂರು ಗ್ರಾಮಸ್ಥರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಾಳೆಯಡ ದಿನ ಮಾಯಮ್ಮ ಪ್ರಾರ್ಥಿಸಿದರು. ಅರುಣ್ ಪಳಂಗಪ್ಪ ಸ್ವಾಗತಿಸಿ ನಿರೂಪಿಸಿ, ವಂದಿಸಿದರು.
-ದುಗ್ಗಳ ಸದಾನಂದ