ವೀರಾಜಪೇಟೆ, ಜೂ. ೨೮: ವೀರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲೆ ಅನುಪಮ ಕಿಶೋರ್, ವಿದ್ಯಾರ್ಥಿಗಳಿಗೆ ಕಾನೂನಿನ ಜಾಗೃತಿ ಕಾನೂನಿನ ಅರಿವು ಪ್ರತಿಯೊಬ್ಬ ಮಹಿಳೆಗೆ ಅತ್ಯಗತ್ಯ. ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಕಾನೂನಿನ ರಕ್ಷಣೆಯ ಬಗ್ಗೆ ತಿಳಿದಿದ್ದರೆ ಮಹಿಳೆಯರು ಆತ್ಮವಿಶ್ವಾಸದಿಂದ ಬದುಕಬಹುದು. ಗೃಹಹಿಂಸೆ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಬಾಲ್ಯವಿವಾಹ, ಕೆಲಸದ ಸ್ಥಳದಲ್ಲಿನ ಕಿರುಕುಳ ಮುಂತಾದ ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಕ್ರಮಕೈಗೊಳ್ಳಲು ಕಾನೂನಿನ ಅರಿವು ನೆರವಾಗುತ್ತದೆ. ಇದು ಮಹಿಳೆಯರ ಸಬಲೀಕರಣಕ್ಕೆ ಪ್ರಮುಖ ಅಡಿಪಾಯವಾಗಿದೆ ಎಂದರು.

ವೀಕ್ಷಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಆಂಗ್ಲ ಉಪನ್ಯಾಸಕಿ ಎಂ.ಪಿ. ಡೈನಾ ಸೋಮಯ್ಯ ಸ್ವಾಗತಿಸಿ, ರಾಷ್ಟೀಯ ಸೇವಾ ಯೋಜನ ಘಟಕದ ಕಾರ್ಯಕ್ರಮಾಧಿಕಾರಿಯಾದ ಅನುಪಮ ತಿಮ್ಮಯ್ಯ ವಂದಿಸಿದರು. ನಿರೂಪಣೆಯನ್ನು ವಿದ್ಯಾರ್ಥಿಗಳಾದ ವೀಣಾ ಮತ್ತು ರಕ್ಷಿತಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ನಿವೃತ ಕ್ಯಾಪ್ಟನ್ ಬಾಚುರ ಸಿ. ಪೂಣಚ್ಚ, ಪ್ರಾಂಶುಪಾಲರಾದ ಎಂ.ಕೆ. ಪದ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ.ಪಿ. ಗಾಯತ್ರಿ, ಡೈನಾ ಸೋಮಯ್ಯ, ದಮಯಂತಿ, ದಿವ್ಯ, ಉಪನ್ಯಾಸಕ ವೃಂದದವರು, ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.