ಮಡಿಕೇರಿ, ಜೂ. ೨೮: ಮಡಿಕೇರಿಯ ಸಂತ ಮೈಕಲರ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ವಿದ್ಯಾಸಂಸ್ಥೆಯ ಸಂಚಾಲಕರಾದ ಪ್ಯಾಟ್ರಿಕ್ ಕ್ಸೇವಿಯರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉದ್ಯಮಿಗಳಾದ ಮೊಹಮ್ಮದ್ ಹನೀಫ್ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪಂಕಜ, ಪ್ರೌಢಶಾಲಾ ಮುಖ್ಯ ಶಿಕ್ಷಕ ಜೆಫ್ರಿ ಡಿಸಿಲ್ವಾ, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸರಿತಾ ಮಾಡ್ತಾ ಹಾಗೂ ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕಿ ಸಿಸಿಲಿಯಾ ಉಪಸ್ಥಿತರಿದ್ದರು. ೨೦೨೫ - ೨೬ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಯುವ ಪೀಳಿಗೆಗೆ ಹೆಚ್ಚಿನ ಮಾರ್ಗದರ್ಶನದ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಪ್ರತಿಯೊಂದು ವಿಚಾರವನ್ನು ತಿಳಿಯುವ ಸಾಮರ್ಥ್ಯ ಅವರಿಗಿದೆ. ಆದರೂ ಹಿರಿಯರ ಜೀವನದ ಅನುಭವಗಳು ಅವರಿಗೆ ಮಾರ್ಗದರ್ಶನವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕರು ನಾಯಕನ ಗುಣ, ಶಿಸ್ತು ಹಾಗೂ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮವನ್ನು ಶಿಕ್ಷಕಿ ಚಾಯ್ಸಿ ಡಿಸೋಜಾ ನಿರೂಪಿಸಿದರು. ಆಶಾ ಲೋಬೋ ಅವರು ಸ್ವಾಗತಿಸಿ, ಸಗಯಾ ಮೇರಿ ವಂದಿಸಿದರು.