ನಾಪೋಕ್ಲು, ಜೂ. ೨೮: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ನಾಯಕತ್ವ ಗುಣಗಳನ್ನು ಹಾಗೂ ಚುನಾವಣೆಯ ಪ್ರಕ್ರಿಯೆಯನ್ನು ಶಾಲಾ ಹಂತದಲ್ಲಿಯೇ ಅರಿವು ಮೂಡಿಸುವ ಕೆಲಸವನ್ನು ವಿದ್ಯಾರ್ಥಿ ಸಂಘಗಳ ರಚನೆ ಮೂಲಕ ಮಾಡಲಾಗುತ್ತದೆ ಎಂದು ಸ್ಥಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ಶಿವಣ್ಣ ಎಂ. ಎ.ಸ್ ಹೇಳಿದರು.
ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಬೆಳವಣಿಗೆಯಲ್ಲಿ ಯುವಜನರ ಪಾತ್ರ ಅತಿ ಮುಖ್ಯ. ವಿದ್ಯಾರ್ಥಿ ಸಂಘವು ಉತ್ತಮ ಕಾರ್ಯಕ್ರಮಗಳನ್ನು ಶಾಲಾ ಹಂತದಲ್ಲಿ ನಡೆಸುವುದರ ಮೂಲಕ ಸೃಜನಶೀಲತೆ ಮೆರೆಯಬೇಕಾಗಿದೆ ಎಂದರು.
ಶಾಲಾ ಆಡಳಿತ ಮಂಡಳಿ ನಿರ್ದೇಶಕ ಕಲ್ಯಾಟಂಡ ಪೂಣಚ್ಚ ಮಾತನಾಡಿ, ವಿದ್ಯಾರ್ಥಿ ನಾಯಕರು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳುವುದರ ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ನೀಡಿ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷ ನೆರೆವಂಡ ಸುನಿಲ್ ದೇವಯ್ಯ ಮಾತನಾಡಿ ಶಾಲಾ ಸಂಸತ್ತು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ಮಾಡುವ ಪ್ರತಿ ಉತ್ತಮ ಕೆಲಸದಲ್ಲೂ ನಂಬಿಕೆ ಇರಬೇಕು ಎಂದರು. ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಶಿಕ್ಷಕಿ ಲೀಲಾವತಿ ಪ್ರತಿಜ್ಞಾವಿಧಿ ಬೋಧಿಸಿದರು
ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಬಿದ್ದಾಟಂಡ ಮುತ್ತಣ್ಣ ಪ್ರಾಂಶುಪಾಲರಾದ ಬಿ.ಎಂ. ಶಾರದ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಾಲಾ ನಾಯಕನಾಗಿ ಸೋನಾಲ್ ಕೆ.ವಿ., ಉಪನಾಯಕನಾಗಿ ಧನ್ವಿನ್ ಸಾತ್ವಿಕ್ ಎಂ., ಕಾರ್ಯದರ್ಶಿಯಾಗಿ ಹಾರ್ದಿಕ್ ಕಾಳಪ್ಪ ಪಿ.ಎ, ಶಾಲಾ ಸಾಂಸ್ಕೃತಿಕ ನಾಯಕಿಯಾಗಿ ಆಯಿಷತ್ ಹನ ಬಿ.ಎ, ಉಪನಾಯಕಿಯಾಗಿ ಫಾತಿಮಾ ನಿಶಾ ಎಂ.ಎನ್., ಕಾರ್ಯದರ್ಶಿಯಾಗಿ ನಿಮಿಷ ನೀಲಮ್ಮ ಬಿ.ಜಿ ,ಉಪ ಕಾರ್ಯದರ್ಶಿಯಾಗಿ ಮೋನಿಷಾ ಪಿ.ವಿ, ಶಾಲಾ ಕ್ರೀಡಾ ನಾಯಕನಾಗಿ ಕರುಣ್ ಕಾರ್ಯಪ್ಪ ಸಿ.ಎಸ್ ,ಉಪನಾಯಕಿಯಾಗಿ ಮೇಘನ ಸಿ.ಕೆ, ಕಾರ್ಯದರ್ಶಿಯಾಗಿ ತನುಷ್ ಎ.ಎಂ, ಉಪ ಕಾರ್ಯದರ್ಶಿಯಾಗಿ ಮಹಮ್ಮದ್ ಫಾಸಿಲ್ ಪಿ.ಎ, ಶಾಲಾ ನಾಯಕರಾಗಿ ರಮಿತ್ ಕೃಷ್ಣ ಆರ್., ಉಪನಾಯಕನಾಗಿ ಸಂಕೇತ್ ಕೆ.ಆರ್., ಉಪ ಕಾರ್ಯದರ್ಶಿಯಾಗಿ ಮೊಹಮ್ಮದ್ ಮುಜಮಿಲ್ ಬಿ.ಎ. ಆಯ್ಕೆಯಾದರು. ಪ್ರಾಂಶುಪಾಲರಾದ ಬಿ.ಎಂ. ಶಾರದ ಸ್ವಾಗತಿಸಿದರು. ಶಿಕ್ಷಕಿ ಚಂದ್ರಕಲಾ ನಿರೂಪಿಸಿದರು. ಶಿಕ್ಷಕಿ ಸೀತಮ್ಮ ವಂದಿಸಿದರು.