ಮಡಿಕೇರಿ, ಜೂ. ೩೦ : ಮಡಿಕೇರಿ ಲಯನ್ಸ್ ಕ್ಲಬ್‌ನ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಲ್.ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಕೆ.ಮಧುಕರ್, ಖಜಾಂಚಿಯಾಗಿ ಅಂಬೆಕಲ್ ನವೀನ್ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ನಗರದ ಕಾವೇರಿ ಹಾಲ್‌ನಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಉಪ ರಾಜ್ಯಪಾಲ ಹಾಗೂ ಶಿಕ್ಷಣ ತಜ್ಞ ಹರಿಪ್ರಸಾದ್ ರೈ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ಮಡಿಕೇರಿಯಲ್ಲಿ ೬೧ ವಸಂತಗಳನ್ನು ಪೂರೈಸಿದ್ದು, ಸಾವಿರಾರು ಸಮಾಜಮುಖಿ ಸೇವೆಯ ಮೂಲಕ ತನ್ನದೇ ಛಾಪು ಮೂಡಿಸಿದೆ. ಸಂಸ್ಥೆಯ ನಿಯಮಗಳು, ಹಿರಿಯರ ಮಾರ್ಗದರ್ಶನ, ಸಂಸ್ಥೆಯ ಸಾಮಾಜಿಕ, ಶೈಕ್ಷಣಿಕ ಕಳಕಳಿ ಹಾಗೂ ಮಾನವೀಯ ಗುಣಗಳಿಂದ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಎಲ್.ಮೋಹನ್ ಕುಮಾರ್ ಅವರು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಮಾನವೀಯ ಮೌಲ್ಯ ಮತ್ತು ಸಮಾಜಸೇವೆಯ ಮೂಲಕ ಹಿರಿಯರು ಕಟ್ಟಿದ ಈ ಸಂಸ್ಥೆಯ ಧ್ಯೇಯ, ಉದ್ದೇಶಗಳನ್ನು ಎಲ್ಲರ ಸಹಕಾರದಿಂದ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸೇವಾ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಎಲ್ಲರೂ ಸಮಾಜದ ಅಭಿವೃದ್ಧಿಗೆ ಸಂಕಲ್ಪ ತೊಡೋಣ ಎಂದು ಅಭಿಲಾಷೆ ವ್ಯಕ್ತಪಡಿಸಿದರು.

ಮಡಿಕೇರಿ ಲಯನ್ಸ್ ನಿರ್ಗಮಿತ ಅಧ್ಯಕ್ಷ ಮದನ್ ಮಾದಯ್ಯ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಹತ್ತಾರು ಸೇವಾ ಕಾರ್ಯಗಳನ್ನು ಮಾಡಿದ ತೃಪ್ತಿಯಿದೆ. ಸಂಸ್ಥೆಯ ಸದಸ್ಯತ್ವ ಪಡೆಯುವ ಮೂಲಕ ಸಮಾಜ ಸೇವೆ ಮಾಡಲು ಅವಕಾಶ ದೊರೆತಿದೆ. ಸರ್ವ ಪದಾಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ, ನೂತನ ಆಡಳಿತ ಮಂಡಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಡಾ.ಪಂಚಮ್ ತಿಮ್ಮಯ್ಯ ಲಯನ್ಸ್ ಸಂಸ್ಥೆಯ ಮೂಲಕ ಅಗತ್ಯವಿದ್ದವರಿಗೆ ನೆರವಿನ ಹಸ್ತ ಚಾಚುವ ಕಾರ್ಯ ನಿರಂತರವಾಗಿ ಮುಂದುವರೆಯಲಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ರ‍್ಯಾಂಕ್ ಪಡೆದ ಲಿನ್ಸಿ ದೇಚಮ್ಮ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಿಂಚನಾ ಪ್ರಸನ್ನ ಅವರುಗಳನ್ನು ಗಣ್ಯರು ಸನ್ಮಾನಿಸಿದರು. ಶೈಕ್ಷಣಿಕವಾಗಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತೆ ಗಣ್ಯರು ಕಿವಿಮಾತು ಹೇಳಿದರು. ಇದೇ ಸಂದರ್ಭ ಲಯನ್ಸ್ ಉಪ ರಾಜ್ಯಪಾಲ ಹರಿಪ್ರಸಾದ್ ರೈ ಅವರನ್ನು ಮಡಿಕೇರಿ ಲಯನ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್ ಪ್ರಮುಖರಾದ ನಟರಾಜ್ ಕೆಸ್ತೂರ್, ಎಂ.ಎ.ನಿರAಜನ್, ಕೆ.ಕೆ.ದಾಮೋದರ್, ಜಿ.ಚಿದ್ವಿಲಾಸ್, ಗೀತ ಭಾರತಿರಾಜ್, ಸತ್ಯಭಾಮ, ವಾದಿರಾಜ್ ಸಿ.ಕೆ.ಸೆಲ್ವರಾಜ್, ಹರೀಶ್ ಕೊತಾರಿ, ರವಿ ಪೂಜಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.