ವೀರಾಜಪೇಟೆ, ಜು. ೩: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾಮದಲ್ಲಿ ನಡೆಸುತ್ತಿರುವ ಕಲ್ಲು ಗಣಿಗಾರಿಗೆಯಿಂದ ಸುತ್ತಮುತ್ತ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದ್ದು, ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರ ಪರವಾಗಿ ಕೋದಂಡ ಮಂಜುಳಾ ಅಯ್ಯಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಮೇರಿ ಗ್ರಾಮದ ಸರ್ವೆ ಸಂಖ್ಯೆ ೩೪೩ರಲ್ಲಿ ಎ.ಆರ್. ವೇಣುಗೋಪಾಲ್ ಎಂಬವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ತಾ. ೨೯.೦೪.೨೦೨೬ ರಂದು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನ ಅನ್ವಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ೦೧.೦೭.೨೦೨೬ ರಂದು ಕಡಂಗಮುರೂರು ಗ್ರಾಮದ ಮಹಿಳಾ ಸಮಾಜದಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕಂದಾಯ ಪರಿವೀಕ್ಷಕರು, ಶಿರಸ್ತೇದಾರರು, ಕದನೂರು ಪಂಚಾಯಿತಿ ಪಿಡಿಓ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಭೆ ಆರಂಭವಾಗುತ್ತಿದ್ದAತೆ ಕಲ್ಲು ಕ್ವಾರಿ ಪರವಾನಿಗೆ ಪಡೆದುಕೊಂಡಿರುವ ಎ.ಆರ್. ವೇಣುಗೋಪಾಲ್ ಕಡೆಯಿಂದ ಉಪ ಗುತ್ತಿಗೆ ಪಡೆದುಕೊಂಡಿರುವ ಐದಾರು ಜನರು ಏರುಧ್ವನಿಯಲ್ಲಿ ಗದ್ದಲ ಉಂಟುಮಾಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರನ್ನು ನಿಂದಿಸುತ್ತಾ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಗೆ ಜೀವಬೆದರಿಕೆ ಒಡ್ಡಿರುತ್ತಾರೆ.

ಗುತ್ತಿಗೆದಾರ ವೇಣುಗೋಪಾಲ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಅಮಲ್ಜಾರಿ ಪತ್ರದಲ್ಲಿ ಯಾವುದೇ ತರಹದ ಸ್ಫೋಟಕಗಳನ್ನು ಬಳಸಬಹುದೇ ಅಥವಾ ಇಲ್ಲವೇ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಕ್ವಾರಿ ಸ್ಥಳದ ಸುತ್ತಮುತ್ತಲು ಕೃಷಿ ಜಮೀನು ಮತ್ತು ವಾಸದ ಮನೆಗಳ ಬಗ್ಗೆ ಅನ್ವಯವಾಗುವ ಬಗ್ಗೆ ನಿಖರವಾದ ಮಾಹಿತಿ ಇರುವುದಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ಪಡೆದಿರುವ ನಿರಾಕ್ಷೇಪಣಾ ಪತ್ರದ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಸ್ಫೋಟಕ ಬಳಸಿ ಕಲ್ಲು ಸಿಡಿಸಲು ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಸಾಗಾಟ ಮಾಡಲು ಡಿ.ಜಿ.ಎಂ.ಎಸ್. ಪರವಾನಿಗೆ ಪತ್ರ ಹೊಂದಿರುವ ಬಗ್ಗೆ ಮಾಹಿತಿ ಇಲ್ಲ, ಟಿಪ್ಪರ್ ಹಾಗೂ ಲಾರಿಗಳಲ್ಲಿ ಕಲ್ಲು ಸಾಗಾಟ ಮಾಡಲು ಪರವಾನಗಿ ಹೊಂದಿರುವ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ಆರೋಪಿಸಿದರು.

ಗ್ರಾಮಸ್ಥರು ಗಣಿಗಾರಿಕಯ ವಿರುದ್ಧ ೨೦೨೨ರಿಂದಲೇ ಹೋರಾಟ ನಡೆಸುತ್ತಾ ಬಂದಿದ್ದು, ಸಂಬAಧಪಟ್ಟ ಇಲಾಖೆಗಳಿಗೂ, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ದಿನಾಂಕ ೨೨.೦೪.೨೦೨೬ ರಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಮನವಿ ಪತ್ರ ಸಲ್ಲಿಸಿದ ಹಿನ್ನೆಲೆ ಶಾಸಕರ ಆದೇಶದಂತೆ ೨ ತಿಂಗಳುಗಳ ಕಾಲ ಗಣಿಗಾರಿಕೆ ಸ್ಥಗಿತಗೊಂಡಿತ್ತು. ತಾ.೨೬.೦೬.೨೦೨೬ ರಂದು ಮತ್ತೆ ಪುನಾರಾರಂಭಗೊAಡಿದೆ. ಹಾಗಾದರೆ ಶಾಸಕರ ಆದೇಶ ಕೇವಲ ೨ ತಿಂಗಳಿಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದರು. ಕ್ವಾರಿ ಜಾಗವನ್ನು ಮರು ಸರ್ವೆ ನಡೆಸಲು ಆಗ್ರಹಿಸುತ್ತಿದ್ದು ನಮಗೆ ಮರು ಸರ್ವೆಯ ಅಗತ್ಯವಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಲ್ಯಂಡ ಸದಾ ತಿಮ್ಮಯ್ಯ, ಬಾಚಿರ ಗಣೇಶ್ ಬಿದ್ದಪ್ಪ, ಪೂಳಂಡ ರಾಮು ಮಾಚಯ್ಯ, ಬೆಳೆಗಾರ ತನುಜ್ ಕುಮಾರ್, ಚಿಣ್ಣಪ್ಪ, ಪದÀ್ಮನಾಭ ನಾಯ್ಡು ಉಪಸ್ಥಿತರಿದ್ದರು.