ಸಿದ್ದಾಪುರ, ಜು. ೩: ಕಾಡಾನೆಗಳ ಹಿಂಡು ಕಾಫಿ ತೋಟದ ಸುತ್ತಲೂ ಅಳವಡಿಸಿದ್ದ ಸೋಲಾರ್ ವಿದ್ಯುತ್ ಬೇಲಿಯನ್ನು ಮುರಿದು ಹಾಕಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧÀಲೆ ನಡೆಸಿ ಕಾಫಿಗಿಡಗಳನ್ನು ಧ್ವಂಸಗೊಳಿಸಿ ನೀರಿನ ಟ್ಯಾಂಕನ್ನು ಒಡೆದು ಹಾಕಿರುವ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಗುಹ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ವಾಸವಿರುವ ಜ್ಯೋತಿ ಪೊನ್ನಪ್ಪ ಎಂಬವರಿಗೆ ಸೇರಿದ ಕಾಫಿ ತೋಟದೊಳಗೆ ಮರಿಯಾನೆಗಳು ಸೇರಿದಂತೆ ಕಾಡಾನೆಗಳ ಹಿಂಡು ದಾಂಧÀಲೆ ನಡೆಸಿದೆ. ಸುತ್ತಲೂ ಅಳವಡಿಸಿದ್ದ ಸೋಲಾರ್ ಬೇಲಿಯನ್ನು ಮುರಿದು ಹಾಕಿ ತೋಟದೊಳಗೆ ನುಗ್ಗಿ ದಾಂಧಲೆ ನಡೆಸಿ ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆ ಎಂದು ತೋಟದ ಮಾಲೀಕರಾದ ಜ್ಯೋತಿ ಪೊನ್ನಪ್ಪ ತಿಳಿಸಿದ್ದಾರೆ.

ಇದಲ್ಲದೆ ಮನೆಯ ಸಮೀಪ ಇದ್ದ ನೀರು ತುಂಬಿಸುವ ಟ್ಯಾಂಕ್ ಅನ್ನು ಪುಡಿ ಮಾಡಿದೆ. ತೋಟದ ಮಾಲೀಕರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ .

ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ .ತಂಡದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.